ಮಡಿಕೇರಿ, ಸೆ. ೨೧: ಸಂತ ಮೈಕಲರ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ರೆ.ಫಾ. ಸಂಜಯ್‌ಕುಮಾರ್ ಉದ್ಘಾಟಿಸಿದರು.

ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿನಿಯರು ನೃತ್ಯ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಶಿಕ್ಷಕರಿಗೆ ಎಸ್.ಎಂ. ಸೇಸ್, ಬಕೆಟ್‌ನಿಂದ ಬೊಗಸೆಯಲ್ಲಿ ನೀರು ತಂದು ಬಾಟಲಿಗೆ ತುಂಬುವ ಸ್ಪರ್ಧೆ ಹಾಗೂ ನಿಧಿಶೋಧನಾ ಆಟವನ್ನು ಹಮ್ಮಿಕೊಳ್ಳಲಾಗಿತ್ತು.

ಎಸ್.ಎಂ. ಸೇಸ್ ಆಟದಲ್ಲಿ ಅಲೆಕ್ಸ್, ಬಾಟಲಿಗೆ ನೀರು ತುಂಬುವ ಸ್ಪರ್ಧೆಯಲ್ಲಿ ಕೇಶವ್ ಮತ್ತು ನಿಧಿಶೋಧನಾ ಆಟದಲ್ಲಿ ಪಂಕಜಾ ವಿಜೇತರಾದರು.

ಸಂತ ಮೈಕಲರ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಫಾ. ಸಂಜಯ್‌ಕುಮಾರ್ ಮಾತನಾಡಿ, ಶಿಕ್ಷಕರು ನಿರಂತರವಾಗಿ ಕಲಿಕೆಯಲ್ಲಿ ತೊಡಗುವುದರ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನಧಾರೆ ಎರೆಯಲು ಸಾಧ್ಯ. ವಿದ್ಯಾರ್ಥಿಗಳು ಹಲವು ಸಂಗತಿಗಳನ್ನು ಸಹ ಗುರುಗಳು ಅರಿತುಕೊಳ್ಳಬಹುದು ಎಂದರು.

ಈ ಸಂದರ್ಭ ಸಂತ ಮೈಕಲರ ಶಿಕ್ಷಣ ಸಂಸ್ಥೆಯ ಶಿಕ್ಷಕರ ಕಾರ್ಯಧಕ್ಷತೆಯನ್ನು ಶ್ಲಾಘಿಸಿದರು. ಜೆ. ಮೌಲ್ಯ ಮತ್ತು ಅವನಿಕಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಸಂತ ಮೈಕಲರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎಸ್. ಸುಮಂತ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ಎ. ಜಾನ್ಸನ್, ಸಿಸ್ಟರ್ ಸರಿತಾ, ಸಿಸ್ಟರ್ ಸಿಸಿಲಿಯಾ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.