ನಾಪೋಕ್ಲು, ಸೆ. ೨೧: ಮನೆ, ಸಂಸಾರವನ್ನು ನಿಭಾಯಿಸಿಕೊಂಡು ಸಮಾಜದಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಮಹಿಳೆಯರು ಸಮಾಜದಲ್ಲೂ ಗುರುತರವಾದ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಹೇಳಿದರು.
ನಾಪೋಕ್ಲುವಿನ ಮಹಿಳಾ ಸಮಾಜದ ಕಟ್ಟಡದಲ್ಲಿ ಆಯೋಜಿಸಲಾಗಿದ್ದ ನಂ. ೩೯೩ನೇ ನಾಪೋಕ್ಲು ಸಹಕಾರ ಮಹಿಳಾ ಸಮಾಜದ ೨೦೨೩-೨೪ರ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಿಳೆಯರು ಸಂಘಟಿತರಾಗಿ ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದ ಅವರು, ಸಮಾಜದಲ್ಲಿ ಮುಂದೆ ಬರಬೇಕಾದರೆ ಧೈರ್ಯದಿಂದ ಎದುರಿಸಿ ದನಿ ಎತ್ತಬೇಕು ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್ ಬೇಬ ಮಾತನಾಡಿ, ಸಮಾಜದ ಹಿರಿಯ ಮಹಿಳೆಯರು ಜ್ಞಾನ ವೃದ್ಧಿಸುವ ಕೆಲಸವನ್ನು ಮಾಡಿದ್ದಾರೆ. ಸಮಾಜದಿಂದ ಉತ್ತಮ ಕಾರ್ಯಗಳಾಗುತ್ತಿವೆ ಎಂದರು.
ಮಹಿಳಾ ಸಮಾಜದ ಅಧ್ಯಕ್ಷ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಎಲ್ಲರ ಸಲಹೆ ಸಹಕಾರ ಅವಶ್ಯ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಉಪಾಧ್ಯಕ್ಷೆ ಬೊಪ್ಪಂಡ ಶೈಲಾ ಬೋಪಯ್ಯ, ನಿರ್ದೇಶಕರಾದ ಬಿದ್ದಾಟಂಡ ಗಿರಿಜಾ ಬೋಪಣ್ಣ, ಮುಂಡAಡ ಸುಶೀಲ ಸೋಮಣ್ಣ, ಕೇಟೋಳಿರ ಶಾರದಾ ಪಳಂಗಪ್ಪ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕುಂಡ್ಯೋಳAಡ ಕವಿತಾ ಮುತ್ತಣ್ಣ, ಅಪ್ಪಾರಂಡ ಡೇಸಿ ತಿಮ್ಮಯ್ಯ, ಪುಲ್ಲೆರ ಪದ್ಮಿನಿ ಭೀಮಯ್ಯ, ಕಾರ್ಯದರ್ಶಿ ರಾಜೇಶ್ವರಿ ಲೋಕೇಶ್ ಹಾಗೂ ಸಮಾಜದ ಸದಸ್ಯರು ಉಪಸ್ಥಿತರಿದ್ದರು.