ವೀರಾಜಪೇಟೆ, ಸೆ. ೨೧: ನಂ. ೨೮೦೧ನೇ ವೀರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಅಖಿಲ ಕೊಡವ ಸಮಾಜದಲ್ಲಿ ಸಂಘದ ಅಧ್ಯಕ್ಷ ಎ.ಎಂ. ನಂಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ೫೯೮ ಸದಸ್ಯರು ಹಾಜರಿದ್ದರು. ಸಂಘವು ಈ ಸಾಲಿನಲ್ಲಿ ರೂ. ೨೫.೦೪ ಲಕ್ಷ ಲಾಭವನ್ನು ಗಳಿಸಿದ್ದು, ಸದಸ್ಯರಿಗೆ ಶೇ. ೧೫ ಡಿವಿಡೆಂಡ್ ಅನ್ನು ಮಂಜೂರು ಮಾಡಲಾಗಿದೆ. ಸಂಘವು ೨೨ ಸದಸ್ಯರ ಮಕ್ಕಳಿಗೆ ರೂ. ೬೬ ಸಾವಿರ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ ಮಾಡಿದೆ. ಸಂಘವು ರೂ. ೭ ಕೋಟಿ ಕೆ.ಸಿ.ಸಿ. ಸಾಲ ಮತ್ತು ಇತರ ಸಾಲಗಳಾದ ಜಾಮೀನು ಸಾಲ, ವಾಹನ ಸಾಲ, ಕಟ್ಟಡ ಸಾಲ, ಆಭರಣ ಸಾಲ ಸೇರಿ ರೂ. ೮ ಕೋಟಿ, ಒಟ್ಟಾರೆಯಾಗಿ ರೂ. ೧೫ ಕೋಟಿಯಷ್ಟು ಸಾಲವನ್ನು ವಿತರಣೆ ಮಾಡಿದ್ದು, ಈ ಸಾಲಿನಲ್ಲಿ ರೂ. ೭೦,೯೨,೫೫,೫೩೪ ಗಳ ವಹಿವಾಟನ್ನು ಮಾಡಿದೆ. ರೂ. ೧೯ ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ ಎಂದು ನಂಜಪ್ಪ ಅವರು ಸಭೆಗೆ ಮಾಹಿತಿ ಇತ್ತರು.