ಕುಶಾಲನಗರ, ಸೆ. ೨೧: ಕುಶಾಲನಗರದ ದುಬಾರೆ ಆನೆ ಶಿಬಿರದಿಂದ ಮೈಸೂರು ದಸರಾ ಮೆರವಣಿಗೆಗೆ ಪಾಲ್ಗೊಳ್ಳಲು ತೆರಳಿದ್ದ ಧನಂಜಯ ಹಾಗೂ ಕಂಜನ್ ಆನೆಗಳು ಅರಮನೆ ಆವರಣದಿಂದ ಮುಖ್ಯರಸ್ತೆಗೆ ಸಾಗಿ ಸ್ವಲ್ಪ ಕಾಲ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ಶುಕ್ರವಾರ ತಡರಾತ್ರಿಯಲ್ಲಿ ನಡೆದಿದೆ.
ಎರಡು ಆನೆಗಳ ನಡುವೆ ಘರ್ಷಣೆ ಏರ್ಪಟ್ಟು ಕಂಜನ್ ಆನೆ ಅರಮನೆ ಮುಂಭಾಗದ ಗೇಟ್ ಅನ್ನು ತಳ್ಳಿಕೊಂಡು ರಸ್ತೆಗೆ ಮುನ್ನುಗ್ಗಿದೆ.
ಇದೇ ವೇಳೆ ಕಂಜನ್ ಆನೆಯನ್ನು ಹಿಂಬಾಲಿಸಿದ ಧನಂಜಯ ಆನೆ ಕೂಡ ಅರಮನೆಯಿಂದ ರಸ್ತೆ ಕಡೆಗೆ ದಾಟಿದೆ. ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಜನ ಆತಂಕಗೊAಡು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಅರಮನೆಯ ಜಯ ಮಾರ್ತಾಂಡ ದ್ವಾರದ ಮೂಲಕ ಆನೆಗಳು ಹೊರಬಂದ ಆನೆಗಳನ್ನು ಮಾವುತರಾದ ವಿಜಯ ಮತ್ತು ಭಾಸ್ಕರ ಹಾಗೂ ಕಾವಾಡಿಗಳು ಸಮಯ ಪ್ರಜ್ಞೆ ಮೆರೆದು ಓಡೋಡಿ ಬಂದು ಎರಡು ಆನೆಗಳನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ಅರಮನೆ ಆವರಣದ ಕೋಡಿಸೋಮೇಶ್ವರ ದೇವಸ್ಥಾನದ ಸಮೀಪ ಆನೆಗಳನ್ನು ಕಟ್ಟಿ ಹಾಕಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಶನಿವಾರ ಮುಂಜಾನೆ ದಸರಾದಲ್ಲಿ ಪಾಲ್ಗೊಳ್ಳುವ ಎಲ್ಲ ಆನೆಗಳ ಜೊತೆ ತಾಲೀಮಿನಲ್ಲಿ ಪಾಲ್ಗೊಂಡಿವೆ. ಆನೆಗಳಿಗೆ ಮದ ಬಂದ ಸಂದರ್ಭ ಈ ರೀತಿಯ ಘಟನೆಗಳು ಸಾಮಾನ್ಯ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. -ಚಂದ್ರಮೋಹನ್