ಸೋಮವಾರಪೇಟೆ, ಸೆ. ೨೦: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ಸಾಹಿತ್ಯ ಭವನದಲ್ಲಿ ಇರುವೈಲು ರಘುರಾಮ ಅಶ್ರಣ್ಣ ಮತ್ತು ಲೀಲಾ ಅಶ್ರಣ್ಣ ಸ್ಮಾರಕ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ, ಕೊಡಗಿನ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸ್ಥಾನಮಾನಗಳ ಕುರಿತು ಉಪನ್ಯಾಸ ನೀಡಿದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ನಿರ್ದೇಶಕ ಹಾಗೂ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಶಾಫಿ ಸಅದಿ, ಕೊಡಗಿನಲ್ಲಿ ವಿಭಿನ್ನ ಸಂಸ್ಕೃತಿ ಇದ್ದರೂ, ಸಾಮರಸ್ಯ ಬದುಕು ಇದೆ ಎಂದು ಅಭಿಪ್ರಾಯಿಸಿದರು.

ಕೊಡಗಿನಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿರುವುದರಿಂದ, ಸಾಮರಸ್ಯ ಗಟ್ಟಿಕೊಂಡಿದೆ. ಮುಂದೆಯೂ ಸಾಮರಸ್ಯ ಕದಡಲು ನಾವುಗಳು ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು. ಕೊಡಗಿನ ಆರ್ಥಿಕತೆಗೆ ಕಾಫಿ, ಕಾಳುಮೆಣಸು ತನ್ನದೆ ಆದ ಕೊಡುಗೆ ನೀಡಿದೆ. ಈಗ ಕೊಡಗಿನ ಕಿತ್ತಳೆ ಅವಸಾನದ ಅಂಚಿನಲ್ಲಿದೆ. ಕಿತ್ತಳೆ ಪುನಶ್ಚೇತನಕ್ಕೆ ಸರ್ಕಾರ ಯೋಜನೆ ರೂಪಿಸಬೇಕು ಎಂದರು. ಕೊಡಗಿನಲ್ಲಿ ಭೂಮಾಫಿಯಾದಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಕೃಷಿ ಭೂಮಿ ಉಳಿಯಲೇಬೇಕು. ಬೆಟ್ಟ ಅಗೆದು ರೆಸಾರ್ಟ್ಗಳು, ಹೋಂಸ್ಟೇಗಳ ನಿರ್ಮಾಣಕ್ಕೆ ಅವಕಾಶ ಮಾಡಿ ಕೊಡಬಾರದು. ಪ್ರಕೃತಿಗೆ ಪೂರಕವಾಗಿ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕು ಎಂದು ಆಶಿಸಿದರು. ಕೊಡಗಿನಲ್ಲಿ ಶ್ರೀಮಂತ ಸಂಸ್ಕೃತಿ ಇದ್ದು, ಅದರ ಉಳಿಸಿ, ಬೆಳಸುವುದು ಯುವ ಜನತೆಯ ಕೈಯಲ್ಲಿದೆ ಎಂದು ಕಿವಿಮಾತು ನುಡಿದರು.

ಮುಖ್ಯ ಅತಿಥಿಯಾಗಿದ್ದ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಸದಸ್ಯ ಬಿ.ಈ. ಜಯೇಂದ್ರ ಮಾತನಾಡಿ, ಪ್ರತಿಯೊಬ್ಬರೂ ಮಾತೃಭಾಷೆ ಕನ್ನಡವನ್ನು ಪರಭಾಷಿಕರಿಗೆ ಕಲಿಸುವ ಪ್ರಯತ್ನ ಮುಂದುವರಿಸಬೇಕು. ಮನೆಯಲ್ಲಿ ಮಕ್ಕಳಿಗೆ ಶ್ರೀಮಂತ ಭಾಷೆ ಕನ್ನಡ ಎಂಬುದನ್ನು ಮನವರಿಕೆ ಮಾಡಿಕೊಡಬೇಕೆಂದರು.

ವೇದಿಕೆಯಲ್ಲಿ ಕ.ಸಾ.ಪ. ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಜಿಲ್ಲಾ ಸಹ ಕಾರ್ಯದರ್ಶಿ ಜಲಜಾ ಶೇಖರ್, ಮಾಜಿ ಅಧ್ಯಕ್ಷರಾದ ಜೆ.ಸಿ. ಶೇಖರ್, ಹೆಚ್.ಜೆ. ಜವರ, ಪದಾಧಿಕಾರಿಗಳಾದ ಬಿ.ಟಿ. ತಿಮ್ಮಶೆಟ್ಟಿ, ಜ್ಯೋತಿ ಅರುಣ್, ಎಂ.ಎ. ರುಬಿನಾ ಇದ್ದರು.