ನಾಪೋಕ್ಲು, ಸೆ. ೨೦: ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ೭ನೇ ವಾರ್ಷಿಕ ಮಹಾಸಭೆ ಪೆರಾಜೆಯ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆಯಿತು. ಸಹಕಾರ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಸಂಘವು ವರದಿ ವರ್ಷದಲ್ಲಿ ೧೯೩ ಕೋಟಿ ವಾರ್ಷಿಕ ವ್ಯವಹಾರವನ್ನು ನಡೆಸಿ ೩೮.೪೭ ಲಕ್ಷ ಲಾಭಗಳಿಸಿದೆ. ವಿಶೇಷವಾಗಿ ರಬ್ಬರ್ ವ್ಯವಹಾರ ಮಾಡಿದ ಸದಸ್ಯರುಗಳಿಗೆ ಕೆ.ಜಿಗೆ ರೂ ೨ ರಂತೆ ಪ್ರೋತ್ಸಾಹ ಧನವನ್ನು ನೀಡಲು ೫.೯೫ ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ. ಸದಸ್ಯರಿಗೆ ಶೇ. ೮ ರಂತೆ ಡಿವಿಡೆಂಡ್ ಘೋಷಿಸಲಾಗಿದೆ ಎಂದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಅಶೋಕ ಪಿ.ಎಂ, ನಿರ್ದೇಶಕರುಗಳಾದ ಹೊನ್ನಪ್ಪ ಅಮೆಚೂರು, ಜಯರಾಮ ನಿಡ್ಯಮಲೆ ಬಿ, ಸೀತಾರಾಮ ಕದಿಕಡ್ಕ, ಧನಂಜಯ ಕೋಡಿ, ಪ್ರಮೀಳ ಬಂಗಾರಕೋಡಿ, ಪುಷ್ಪಾವತಿ ವ್ಯಾಪಾರೆ, ಪ್ರದೀಪ ಕೆ.ಎಂ, ದೀನರಾಜ್ ದೊಡ್ಡಡ್ಕ, ಶೇಷಪ್ಪ ನಾಯ್ಕ ನಿಡ್ಯಮಲೆ, ಜಯರಾಮ ಪಿ.ಟಿ, ಕಿರಣ್ ಬಂಗಾರಕೋಡಿ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ್ ಕೆ.ಜಿ. ಇವರುಗಳು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಹೆಚ್.ಕೆ. ಸರ್ವರನ್ನು ಸ್ವಾಗತಿಸಿ ನಿರ್ದೇಶಕರಾದ ಪ್ರಮೀಳಾ ಬಂಗಾರಕೋಡಿ ಅವರು ವಂದಿಸಿದರು.