ಸೋಮವಾರಪೇಟೆ, ಸೆ. ೨೦: ಸಹಕಾರಿಗಳೇ ಸಹಕಾರ ಸಂಘದ ತಳಪಾಯವಾಗಿದ್ದು, ಇವರುಗಳ ಸಹಕಾರದಿಂದ ಮಾತ್ರ ಸಹಕಾರ ಕ್ಷೇತ್ರದ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ಸದಸ್ಯರುಗಳು ಸಂಘದ ಬೆಳವಣಿಗೆಗೆ ಸಹಕರಿಸಬೇಕೆಂದು ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ರೂಪಾ ಸತೀಶ್ ಹೇಳಿದರು.

ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. ೧.೧೯ ಕೋಟಿ ಲಾಭ ಗಳಿಸಿದೆ. ಸಹಕಾರ ತತ್ವದ ಆಧಾರದ ಮೇಲೆ ಸದಸ್ಯರಿಗೆ ಹೆಚ್ಚು ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರು.

೧೦೫ನೇ ವರ್ಷದಲ್ಲಿ ಲಾಭದಲ್ಲಿ ಹೆಜ್ಜೆ ಹಾಕಿರುವ ಸಹಕಾರ ಸಂಘದಲ್ಲಿ ೫೨೦೯ ಮಂದಿ ಸದಸ್ಯರಿದ್ದು, ಪ್ರಸಕ್ತ ಅವಧಿಯಲ್ಲಿ ೩೦೦ ಮಂದಿ ನೂತನವಾಗಿ ಸದಸ್ಯರಾಗಿದ್ದಾರೆ. ರೂ. ೩೮೦ ಕೋಟಿ ವ್ಯವಹಾರ ಮಾಡಲಾಗಿದ್ದು, ೧.೧೯ ಕೋಟಿ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ. ೨೨ ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದರು.

ಸAಘದ ಒಟ್ಟು ದುಡಿಯುವ ಬಂಡವಾಳ ೭೭.೨೬ ಕೋಟಿಯಾಗಿದೆ. ಸಂಘದಲ್ಲಿ ಜಾಮೀನು ಸಾಲದ ವಿಮಾ ಯೋಜನೆ, ಪಿಗ್ಮಿ ಓವರ್‌ಡ್ರಾಫ್ಟ್ ಸಾಲದ ವಿಮಾ ಯೋಜನೆ, ಸ್ವಸಹಾಯ ಮತ್ತು ಜಂಟಿ ಭಾದ್ಯತಾ ಗುಂಪುಗಳ ಯೋಜನೆಯನ್ನು ರೂಪಿಸಲಾಗಿದೆ. ಹಿಂದಿನಿAದ ಇಲ್ಲಿಯವರೆಗೂ ಸಂಘವು ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ ಎ. ತರಗತಿಯನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.

ಸಂಘದಲ್ಲಿ ಯಶಸ್ವಿನಿ ರೈತರ ವಿಮಾ ಯೋಜನೆ ಜಾರಿಯಲ್ಲಿದ್ದು, ೨೦೨೩-೨೪ನೇ ಸಾಲಿನಲ್ಲಿ ಒಟ್ಟು ೧೦೯೩ ಜನ ಸದಸ್ಯರು ಯೋಜನೆಯಲ್ಲಿ ಹೆಸರು ನೋಂದಾಯಿಸಿ ಕೊಂಡಿದ್ದಾರೆ. ರೂ. ೧,೫೭,೫೭೫ ಗಳನ್ನು ವಿಮಾ ಯೋಜನೆಗೆ ಜಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಂಘದಲ್ಲಿ ಜಾಮೀನು ಸಾಲ, ಕೆಸಿಸಿ ಫಸಲು ಸಾಲ, ಕೃಷಿಯೇತರ ಆಸ್ತಿ ಆಧಾರಿತ ಸಾಲ, ಮಧ್ಯಮಾವಧಿ ಸಾಲ, ಪಶು ಸಂಗೋಪನೆ, ಜಂಟಿ ಭಾದ್ಯತೆ ಸಾಲ, ಸೋಲಾರ್ ಸಿಸ್ಟಂ, ಪಿಗ್ಮಿ ಓವರ್ ಡ್ರಾಫ್ಟ್, ಸ್ವಸಹಾಯ ಗುಂಪು ಸಾಲ, ಆಭರಣ ಈಡಿನ ಸಾಲ, ಗೃಹ ನಿರ್ಮಾಣ, ಪಿಗ್ಮಿ ಠೇವಣಿ, ವಾಹನ ಖರೀದಿ, ಸ್ವರ್ಣ ನಾಣ್ಯ ಯೋಜನೆ ಸೇರಿದಂತೆ ಇನ್ನಿತರ ಸಾಲಗಳನ್ನು ನೀಡಲಾಗುತ್ತಿದ್ದು, ಸಾಲ ಮರುಪಾವತಿ ಶೇ.೯೮.೩೯ರಷ್ಟಿದೆ. ಸಂಘದ ಎಲ್ಲಾ ಸೌಲಭ್ಯಗಳನ್ನು ಸದಸ್ಯರುಗಳು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ವಾರ್ಷಿಕ ಮಹಾಸಭೆಯಲ್ಲಿ ೨೦೨೩-೨೪ನೇ ಸಾಲಿನ ೭ನೇ ತರಗತಿ, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರ ಮತ್ತು ಸಂಘದ ವ್ಯಾಪ್ತಿಗೆ ಬರುವ ಸರಕಾರಿ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ಸದಸ್ಯೇತರ ಮಕ್ಕಳಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು. ಸಂಘದ ಶತಮಾನೋತ್ಸವ ವಿದ್ಯಾನಿಧಿಯಿಂದ ಸೋಮವಾರಪೇಟೆ ತಾಲೂಕಿನ ವಸತಿ ರಹಿತ ಸರಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಪಿ. ದಿವಾನ್, ನಿರ್ದೆಶಕರುಗಳಾದ ಜಿ.ಬಿ. ಸೋಮಯ್ಯ, ಬಿ.ಎಂ. ಸುರೇಶ್, ಹೆಚ್.ಕೆ. ಮಾದಪ್ಪ, ಬಿ.ಎಂ. ಈಶ್ವರ್, ಕೆ.ಕೆ. ಚಂದ್ರಿಕಾ, ಪಿ.ಡಿ. ಮೋಹನ್‌ದಾಸ್, ಹೆಚ್.ಕೆ. ಚಂದ್ರಶೇಖರ್, ಪಿ.ಎ. ಅನಿತ, ಬಿ.ಶಿವಪ್ಪ, ಎಂ.ವಿ. ದೇವರಾಜ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಅವರುಗಳು ಉಪಸ್ಥಿತರಿದ್ದರು.