ಮುಳ್ಳೂರು, ಸೆ. ೨೦: ಸರಕಾರ ಮತ್ತು ಶಿಕ್ಷಣ ಇಲಾಖೆಯ ಯೋಜನೆಗಳಲ್ಲಿ ಒಂದಾದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವುದರಿಂದ ಇದು ಭವಿಷ್ಯದಲ್ಲಿ ವಿದ್ಯಾರ್ಥಿಗಳ ಜೀವನಕ್ಕೂ ದಾರಿಯಾಗುತ್ತದೆ ಎಂದು ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಸ್. ಮಂಜುನಾಥ್ ಅಭಿಪ್ರಾಯಪಟ್ಟರು.

ಅವರು ಸಮೀಪದ ನಿಡ್ತ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಹಂಡ್ಲಿ ಕ್ಲಸ್ಟರ್ ಮಟ್ಟದ ೨೦೨೪-೨೫ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಸರ್ವಶಿಕ್ಷಣ ಯೋಜನೆ ಅನುಷ್ಠಾನಗೊಂಡಿದ್ದ ಕಾಲದಿಂದ ಇಂದಿನವರೆಗೂ ಶಾಲಾ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಜಿ.ಪಂ. ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ ಮಾತನಾಡಿ, ಆಧುನಿಕತೆಯಿಂದ ಸಮಾಜ ಬದಲಾಗುತ್ತಿದ್ದರೂ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಬದಲಾಗುವುದಿಲ್ಲ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ಮೂಲಕ ನಡೆಸುತ್ತಿರುವ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ತನ್ನಲ್ಲಿರುವ ಪ್ರತಿಭೆಯನ್ನು ಕಾರಂಜಿಯAತೆ ಅನಾವರಣಗೊಳಿಸುವಂತೆ ಸಲಹೆ ನೀಡಿದರು.

ಹಂಡ್ಲಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕರು, ಪೋಷಕರು ಮತ್ತು ಮಕ್ಕಳ ಮೂಲಕ ಶಿಕ್ಷಣ ಇಲಾಖೆಯು ಪ್ರತಿಭಾ ಕಾರಂಜಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳುತ್ತಿದೆ. ಈ ಮೂಲಕ ಮಕ್ಕಳ ಪ್ರತಿಭೆಗಳು ಅನಾವರಣಗೊಳ್ಳುತ್ತಿದೆ ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಭೆಗಳು ಅನಾವರಣಗೊಳಿಸಬೇಕಿರುವ ಉದ್ದೇಶದಿಂದ ಶಿಕ್ಷಣ ಇಲಾಖೆ ಈಗ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಹಿಂದೆ ಇದ್ದ ಸಾಮೂಹಿಕ ಸ್ಪರ್ಧೆಯನ್ನು ರದ್ದುಗೊಳಿಸಿ ವೈಯಕ್ತಿಕ ಸ್ಪರ್ಧೆಗಳಿಗೆ ಅವಕಾಶ ನೀಡುತ್ತಿದ್ದು, ಹಂಡ್ಲಿ ಕ್ಲಸ್ಟರ್ ಮಟ್ಟದಲ್ಲಿ ವಿವಿಧ ಶಾಲೆಗಳಿಂದ ೨೭ ವೈಯಕ್ತಿಕ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ ಎಂದರು.

ಕಾರ್ಯಕ್ರಮವನ್ನು ನಿಡ್ತ ಗ್ರಾ.ಪಂ. ಅಧ್ಯಕ್ಷ ಮನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್, ಗ್ರಾಮದ ಹಿರಿಯ ಮುಖಂಡ ಸುಬ್ಬಪ್ಪ ಮಾತನಾಡಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ನೇತ್ರಾವತಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸರಕಾರಿ ನೌಕರರ ರಾಜ್ಯ ಸಂಘದ ನಿರ್ದೇಶಕ ಸುರೇಶ್, ಗ್ರಾ.ಪಂ. ಸದಸ್ಯರಾದ ಹರೀಶ್, ಲತಾ ವೆಂಕಟೇಶ್, ತೀರ್ಥಾನಂದ್, ತಸ್ಲಿಂ, ತಾಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿ ಕವಿತ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ್, ಶಾಲಾ ಪ್ರಬಾರಿ ಮುಖ್ಯ ಶಿಕ್ಷಕಿ ರತ್ನ, ಶಿಕ್ಷಕಿ ಸಾವಿತ್ರಿ ವಿವಿಧ ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಜರಿದ್ದರು. ಈ ಸಂದರ್ಭ ಇಲಾಖೆ ವತಿಯಿಂದ ಜನಪ್ರತಿನಿಧಿಗಳು ಸ್ಥಳೀಯ ಪ್ರಮುಖರನ್ನು ಸನ್ಮಾನಿಸಲಾಯಿತು