ಕೂಡಿಗೆ, ಸೆ. ೨೦: ಕರ್ನಾಟಕದ ಮೊಟ್ಟಮೊದಲ ಹಾಲಿನ ಡೈರಿ ಎಂಬ ಖ್ಯಾತಿಯ ಕೂಡಿಗೆ ಡೈರಿಯ ಸರ್ವಾಂಗೀಣ ಪ್ರಗತಿಯ ಮೂಲಕ ಅಭಿವೃದ್ಧಿ ಪಡಿಸುವ ಚಿಂತನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಾಸನ ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ತಿಳಿಸಿದ್ದಾರೆ. ಅವರು ಕೂಡಿಗೆ ಡೈರಿ ಅಧಿಕಾರಿಗಳ, ಕಾರ್ಮಿಕ ವೃಂದ ವತಿಯಿಂದ ಹಮ್ಮಿಕೊಂಡಿದ್ದ ಗೌರಿ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೂಡಿಗೆ ಡೈರಿಯ ಮುಂಭಾಗದ ಕಟ್ಟಡವು ಶೀತಲ ವ್ಯವಸ್ಥೆಯಲ್ಲಿ ಇರುವುದರಿಂದ ಈ ಕಟ್ಟಡದಲ್ಲಿ ಕಛೇರಿ ಕೆಲಸವನ್ನು ಸಹ ಸ್ಥಗಿತಗೊಳಿಸಲಾಗಿ, ಬದಲಿ ವ್ಯವಸ್ಥೆ ಮಾಡಲಾಗಿರುವ ಹಿನ್ನೆಲೆ ಶೀತಲ ಕಟ್ಟಡ ತೆರವುಗೊಳಿಸಿ ಸುಸಜ್ಜಿತವಾದ ಕಟ್ಟಡ, ಇದರ ಜೊತೆಯಲ್ಲಿ ಆಧುನಿಕ ಪ್ರಯೋಗಾಲಯ ಸೇರಿದಂತೆ ವಿವಿಧ ವಿಭಾಗದ ಕಟ್ಟಡಗಳ ನಿರ್ಮಾಣ ಹಾಗೂ ಈಗಾಗಲೇ ಇರುವ ಶೀತಲೀಕರಣ ಘಟಕವನ್ನು ನೂತನ ತಂತ್ರಜ್ಞಾನ ಯಂತ್ರಗಳ ಅಳವಡಿಕೆ ಮೂಲಕ ಅಭಿವೃದ್ಧಿ ಪಡಿಸುವ ವಿವಿಧ ಯೋಜನೆಯನ್ನು ರೂಪಿಸಲಾಗಿದೆ ಅದರ ಹಿನ್ನೆಲೆಯಲ್ಲಿ ಹಾಸನ ಹಾಲು ಒಕ್ಕೂಟದ ಯೋಜನೆಯ ಅಡಿಯಲ್ಲಿ ಕಾಮಗಾರಿಯ ಕ್ರಿಯಾಯೋಜನೆಯು ಇಂಜಿನಿಯರ್ ಮೂಲಕ ಸಿದ್ದಗೊಳ್ಳುತ್ತಿದ್ದು, ಅದರ ಮೂಲಕ ನೂತನ ಆಧುನಿಕ ತಂತ್ರಜ್ಞಾನದ ವ್ಯವಸ್ಥೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲೆಯ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್, ಒಕ್ಕೂಟದ ಪ್ರಧಾನ ವ್ಯವಸ್ಥಾಪಕಿ ಮಾನಸ ಪಟೇಲ್, ಕೂಡಿಗೆ ಡೈರಿ ಮೇನೇಜರ್ ನಂದೀಶ್, ಮಾರುಕಟ್ಟೆ ವಿಭಾಗದ ಮೇನೇಜರ್ ಮಲ್ಲೇಶ್ ಹಾಜರಿದ್ದರು.