ಮಡಿಕೇರಿ, ಸೆ. ೧೯: ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಮಡಿಕೇರಿ ತಾಲೂಕು ಬೆಟ್ಟಗೇರಿ ವಲಯ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಸಹಕಾರದೊಂದಿಗೆ ೧೮೫೫ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭ ಕಾರುಗುಂದ ಗೌಡ ಸಮಾಜ ಕಾರುಗುಂದದಲ್ಲಿ ಜರುಗಿತು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಶಿಬಿರಾಧಿಕಾರಿ ಪಿ.ಪಿ. ನಂದಕುಮಾರ್ , ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿ, ಜನಜಾಗೃತಿ ವೇದಿಕೆ ಆರಂಭ, ಉದ್ದೇಶ, ಮದ್ಯವರ್ಜನ ಶಿಬಿರ ಅನುಷ್ಠಾನ, ರೂಪುರೇಷೆ, ಶಿಬಿರದ ದೈನಂದಿನ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಇದೊಂದು ಮನ ಪರಿವರ್ತನೆಯ ಕಾರ್ಯಕ್ರಮ ಎಂದರು. ಗೌಡ ಸಮಾಜ ಚೇರಂಬಾಣೆಯ ಅಧ್ಯಕ್ಷ ಕೊಡಪಾಲು ಗಣಪತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷ ಬಿ.ಎಂ. ಅಯ್ಯಪ್ಪ ಮಾತನಾಡಿ ಮದ್ಯವರ್ಜನ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು. ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೆಳ್ಯನ ಚಂದ್ರಪ್ರಕಾಶ್ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ಕೋರಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಮಾಜದಲ್ಲಿ ಇದುವರೆಗೂ ಯಾರು ಮಾಡದಿರುವ ವಿಶೇಷವಾದ ಕಾರ್ಯಕ್ರಮವನ್ನು ಜಗತ್ತಿನಲ್ಲಿ ಯಾರಾದರೂ ಮಾಡುವವರಿದ್ದರೆ ಅದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರು ಎಂದರು. ಸಂಸ್ಥೆಯ ಮುಖೇನ ಸಮುದಾಯದ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಶೈಕ್ಷಣಿಕ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮ ಮತ್ತು ಜನತೆಯಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ವಿಶಿಷ್ಟ ಮತ್ತು ವಿಭಿನ್ನ ಕಾರ್ಯಕ್ರಮಗಳೆಲ್ಲವು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಮದ್ಯವರ್ಜನ ಶಿಬಿರ ಪವಿತ್ರ ಕಾರ್ಯಕ್ರಮ. ಇದು ಕೇವಲ ಧರ್ಮಸ್ಥಳದ ಕಾರ್ಯಕ್ರಮ ಅಲ್ಲ. ಬದಲಾಗಿ ಇದೊಂದು ಸಮುದಾಯದ ಸಹಭಾಗಿತ್ವದ ಕಾರ್ಯಕ್ರಮ. ಆದ್ದರಿಂದ ಸಾರ್ವಜನಿಕರ ತನು-ಮನ-ಧನ ಸಹಕಾರದೊಂದಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಮದ್ಯಪಾನವೆಂಬುದೊAದು ಸಮಾಜವನ್ನು ಬಾಧಿಸುವ ಮತ್ತು ಜಾಗೃತೆ ತಪ್ಪಿದರೆ ಯಾರನ್ನೂ ಬಿಡದ ಖಾಯಿಲೆ. ಮದ್ಯಪಾನಕ್ಕೆ ಜಾತಿ, ಧರ್ಮ, ಪಕ್ಷ, ಭೇದ ಯಾವುದೂ ಇರುವುದಿಲ್ಲ. ಶಿಬಿರವನ್ನು ಸಂಘಟಿಸಿದ ವ್ಯವಸ್ಥಾಪನಾ ಸಮಿತಿ ಹಾಗೂ ಜನಜಾಗೃತಿ ವೇದಿಕೆಯ ಸಹಕಾರವನ್ನು ಸ್ಮರಿಸಿ ಕಾರ್ಯಕ್ರಮಕ್ಕೆ ಶುಭಾಶಯವನ್ನು ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಂ.ಬಿ ಅಭಿಮನ್ಯು ಕುಮಾರ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಮೇಲ್ವಿಚಾರಕರುಗಳು, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ತಾಲೂಕಿನ ಸೇವಾಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರುಗಳು, ನವಜೀವನ ಸಮಿತಿ ಸದಸ್ಯರುಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.