ವೀರಾಜಪೇಟೆ, ಸೆ. ೧೮: ವೈಸ್‌ಮೆನ್ಸ್ ಕ್ಲಬ್ ವತಿಯಿಂದ ವೀರಾಜಪೇಟೆಯ ಸಂತ ಅನ್ನಮ್ಮ ಶಾಲಾ ಸಭಾಂಗಣದಲ್ಲಿ ರಾಜ್ಯಮಟ್ಟದ ಚೆಸ್ (ಚದುರಂಗ) ಪಂದ್ಯಾವಳಿ ನಡೆಯಿತು.

ರಾಜ್ಯಮಟ್ಟದ ಚದುರಂಗ ಸ್ಪರ್ಧೆಯನ್ನು ಸಂತ ಅನ್ನಮ್ಮ ಚರ್ಚ್ ಧರ್ಮಗುರುಗಳಾದ ಜೇಮ್ಸ್ ಡೊಮಿನಿಕ್ ಚದುರಂಗ ಸ್ಪರ್ಧೆ ಆಡುವ ಮೂಲಕ ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಲ್ ಎ.ಕೆ. ರಫಾಯಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಂದ್ಯಾಟಕ್ಕೆ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಡಿಕೇರಿ ವಲಯ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಚೆಸ್ ಪಂದ್ಯಾಟದಲ್ಲಿ ಜಯಶಾಲಿಗಳಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಎರಡು ವಿಭಾಗಗಳಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ನಗದು ಬಹುಮಾನ ರೂ. ೧೦ ಸಾವಿರ ರೂಪಾಯಿ ಹಾಗೂ ಪಾರಿತೋಷಕವನ್ನು, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನವನ್ನು ವಿತರಿಸಲಾಯಿತು.

ಇದೇ ಸಂದರ್ಭ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಸಂತ ಅನ್ನಮ್ಮ ಚರ್ಚ್ನ ಧರ್ಮಗುರುಗಳಾದ ಜೇಮ್ಸ್ ಡೊಮಿನಿಕ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭ ವೈಸ್‌ಮೆನ್ ಕ್ಲಬ್ ವೀರಾಜಪೇಟೆ ಅಧ್ಯಕ್ಷ ಕೆ.ಎಸ್. ಜಗದೀಶ್, ಕ್ಲಬ್‌ನ ಪದಾಧಿಕಾರಿಗಳು ಮತ್ತು ಕ್ರೀಡಾಸ್ಪರ್ಧಿಗಳು ಉಪಸ್ಥಿತರಿದ್ದರು.

ವೈಸ್‌ಮೆನ್ಸ್ ಕ್ಲಬ್ ವತಿಯಿಂದ ಎರಡನೇ ವರ್ಷದ ಚೆಸ್ ಪಂದ್ಯಾಟಕ್ಕೆ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸ್ಪರ್ಧಾಳುಗಳು ಆಗಮಿಸಿದ್ದರು. ಚೆಸ್ ಪಂದ್ಯಾಟದಲ್ಲಿ ಸುಂಟಿಕೊಪ್ಪದ ಪ್ರತಿಭಾವಂತ ಚೆಸ್ ಕ್ರೀಡಾಪಟು ಕೆ.ಹೆಚ್. ವಿನೀಶ್ ಪ್ರಥಮ (ಆಲ್‌ರೌಂಡರ್) ಬಹುಮಾನ ಪಡೆದರು. ಇವರು ಸುಂಟಿಕೊಪ್ಪದ ಕೆ.ಎಂ. ಹರೀಶ್ ಮತ್ತು ಬೀನಾ ಹರೀಶ್ ದಂಪತಿಯ ಪುತ್ರನಾಗಿದ್ದು, ಪ್ರಸ್ತುತ ಅಂಚೆ ಇಲಾಖೆ ಉದ್ಯೋಗಿಯಾಗಿದ್ದಾರೆ.