ಮಡಿಕೇರಿ, ಸೆ. ೧೮: ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ೨೦೨೩-೨೪ನೇ ಸಾಲಿನಲ್ಲಿ ಒಟ್ಟಾರೆ ರೂ. ೧೧೭.೦೧ಲಕ್ಷ ಲಾಭ ಗಳಿಸಿದ್ದು, ಆದಾಯ ತೆರಿಗೆ, ಮತ್ತಿತರ ವೆಚ್ಚಗಳಿಗೆ ಕಾಯ್ದಿರಿಸಿದ ನಂತರ ರೂ. ೩೩.೦೯ರಷ್ಟು ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಜಿ.ಎಂ.ಸತೀಶ್ ಪೈ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಬ್ಯಾಂಕ್ ೨೪೯೩ ಮಂದಿ ಸದಸ್ಯರುಗಳನ್ನು ಹೊಂದಿದ್ದು, ರೂ. ೧೭೮.೧೬ ಲಕ್ಷ ಪಾಲು ಹಣ ಸಂಗ್ರಹಗೊAಡಿದೆ. ದುಡಿಯುವ ಬಂಡವಾಳ ರೂ. ೫೩೧೪.೭೭ಲಕ್ಷ ಆಗಿದ್ದು, ಕಳೆದ ಸಾಲಿಗಿಂತ ರೂ. ೨೯೮.೯೪ ಲಕ್ಷದಷ್ಟು ಅಧಿಕಗೊಂಡಿದೆ. ರೂ. ೪,೮೨೮,.೪೩ ಲಕ್ಷದಷ್ಟು ವಿವಿಧ ಠೇವಣಾತಿಗಳನ್ನು ಹೊಂದಿದ್ದು, ಕಳೆದ ಸಾಲಿಗಿಂತ ರೂ. ೪೦೧.೪೪ ಲಕ್ಷದಷ್ಟು ಏರಿಕೆ ಉಂಟಾಗಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕಿನ ಗ್ರಾಹಕರುಗಳಿಗೆ ರೂ. ೨,೮೪೭.೪೮ ಲಕ್ಷದಷ್ಟು ವಿವಿಧ ರೂಪದ ಸಾಲ ವಿತರಣೆ ಮಾಡಲಾಗಿದೆ. ಬ್ಯಾಂಕಿನ ಜಿ.ಟಿ. ರಸ್ತೆಯಲ್ಲಿರುವ ಶಾಖೆಯಲ್ಲಿಯೂ ರೂ. ೧೦೬.೧೫ ಲಕ್ಷದಷ್ಟು ವ್ಯವಹಾರ ನಡೆಸಿದ್ದು, ರೂ.೧೬.೫೦ಲಕ್ಷದಷ್ಟು ಲಾಭ ಗಳಿಸಿದೆ. ಪ್ರಸ್ತುತ ಸಾಲಿನಲ್ಲಿ ಶಾಖೆ ರೂ. ೧,೦೩೩ ಲಕ್ಷ ಠೇವಣಿ ಹೊಂದಿದ್ದು, ರೂ. ೬೨೦.೬೭ ಲಕ್ಷದಷ್ಟು ವಿವಿಧ ರೂಪದ ಸಾಲ ನೀಡಲಾಗಿದೆ ಎಂದು ತಿಳಿಸಿದರು.
ಸೌಲಭ್ಯಗಳು : ಬ್ಯಾಂಕಿನಲ್ಲಿಡುವ ಠೇವಣಾತಿಗಳಿಗೆ ಶೇ.೨ರಿಂದ ಶೇ. ೭.೨೫ರವರೆಗೆ ಬಡ್ಡಿ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಒಂದು ವರ್ಷಕ್ಕೂ ಮೇಲ್ಪಟ್ಟು ನೀಡುವ ಬಡ್ಡಿಗಳಿಗೆ ಶೇ.೦.೫೦ ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ. ಬ್ಯಾಂಕಿನ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹತ್ತನೇ, ಪಿಯುಸಿ, ಪದವಿ ತರಗತಿಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಲಾಗುವದೆಂದು ಸತೀಶ್ ಪೈ ಹೇಳಿದರು.
೨೧ರಂದು ಮಹಾಸಭೆ : ಬ್ಯಾಂಕ್ನ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆಯು ತಾ.೨೧ರಂದು ಮಡಿಕೇರಿಯ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಬ್ಯಾಂಕ್ನ ಉಪಾಧ್ಯಕ್ಷ ನಾಗೇಶ್, ಕಾರ್ಯದರ್ಶಿ ಸಿ.ಕೆ. ಬಾಲಕೃಷ್ಣ, ನಿರ್ದೇಶಕರುಗಳಾದ ಎಸ್ಸಿ. ಸತೀಶ್ಕುಮಾರ್, ಬಿ.ಎಂ.ರಾಜೇಶ್, ಬಿ.ಕೆ. ಜಗದೀಶ್ ಇದ್ದರು.