ಶ್ರೀಮಂಗಲ, ಸೆ. ೧೮: ಮಕ್ಕಳಲ್ಲಿ ಸವಾಲುಗಳನ್ನು ಎದುರಿಸುವ ಮನೋಭಾವವನ್ನು ಬೆಳೆಸಲು ಕ್ರೀಡೆ ಸಹಕಾರಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ ಅಭಿಪ್ರಾಯಪಟ್ಟರು.

ಹುದಿಕೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಸರ್ಕಾರದ ಅನುದಾನ ರೂ. ೨೫ ಲಕ್ಷದಲ್ಲಿ ಹುದಿಕೇರಿಯ ಜನತಾ ಪ್ರೌಢಶಾಲೆಯಲ್ಲಿ ಪುನಶ್ಚೇನಗೊಳಿಸಿದ ಮೈದಾನ ಪುನಶ್ಚೇತನ ಉದ್ಘಾಟಿಸಿ ಅವರು ಮಾತನಾಡಿದರು.

ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಕ್ರೀಡೆಯಿಂದ ಬೆಳೆಸಿಕೊಳ್ಳಬಹುದು.

ಕೊಡಗು ಜಿಲ್ಲೆ ಕ್ರೀಡೆಯಲ್ಲಿ ಹೆಚ್ಚಿನ ಪ್ರಸಿದ್ಧಿ ಪಡೆದಿದೆ. ಮಕ್ಕಳಲ್ಲಿ ಕ್ರೀಡಾ ಉತ್ಸಾಹ ಬೆಳಸಲು ಇಂತಹ ಕ್ರೀಡಾಕೂಟಗಳು ಅಗತ್ಯ ಎಂದರು.

ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಹಿಂದೆ ನೀಡಿದ ಆಶ್ವಾಸನೆಯಂತೆ ಕ್ಷೇತ್ರದ ೮ ಹೋಬಳಿಗಳಲ್ಲಿ ತಲಾ ಒಂದು ಮೈದಾನಕ್ಕೆ ರೂ. ೨೫ ಲಕ್ಷದಂತೆ ಒಟ್ಟು ಎರಡು ಕೋಟಿ ಅನುದಾನದಲ್ಲಿ ಕ್ರೀಡಾ ಮೈದಾನವನ್ನು ಪುನಶ್ಚೇತನ ಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆರಂಭವಾಗಿದೆ. ಈಗಾಗಲೇ ವೀರಾಜಪೇಟೆ ತಾಲೂಕು ಮೈದಾನವನ್ನು ಪುನಶ್ಚೇತನ ಮಾಡಿ ಉದ್ಘಾಟಿಸಿದ ನಂತರ ಎರಡನೆಯ ಮೈದಾನವಾಗಿ

(ಮೊದಲ ಪುಟದಿಂದ) ಹುದಿಕೇರಿಗೆ ಹೋಬಳಿಯ ಹುದಿಕೇರಿ ಜನತಾ ಪ್ರೌಢಶಾಲೆಯ ಮೈದಾನವನ್ನು ಅಭಿವೃದ್ಧಿಗೊಳಿಸಿ ಉದ್ಘಾಟಿಸಲಾಗಿದೆ ಎಂದರು.

ಕೊಡಗು ಜಿಲ್ಲಾಮಟ್ಟದ ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟವನ್ನು ಉದ್ಘಾಟಿಸಿದ ಹುದಿಕೇರಿ ಜನತಾ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಮಂಡAಗಡ ಎಂ. ಅಶೋಕ್ ಅವರು ಮಾತನಾಡಿ, ಶಾಸಕ ಎ.ಎಸ್. ಪೊನ್ನಣ್ಣ ಅವರು ವಿಶೇಷ ಮುತುವರ್ಜಿ ವಹಿಸಿ ಹುದಿಕೇರಿ ಜನತಾ ಪ್ರೌಢಶಾಲೆಯ ಮೈದಾನವನ್ನು ಪುನರ್ ನವೀಕರಣಕ್ಕೆ ರೂ. ೨೫ ಲಕ್ಷ ಅನುದಾನ ನೀಡಿ ಅಭಿವೃದ್ಧಿಪಡಿಸಿದ್ದಾರೆ. ಕ್ರೀಡಾ ಮೈದಾನವನ್ನು ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಹೆಚ್ಚು ಮೆರಗನ್ನು ನೀಡುವ ಉದ್ದೇಶದಿಂದ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಸಹ ಇದೇ ಮೈದಾನದಲ್ಲಿ ಆಯೋಜಿಸುವಂತೆ ಆಡಳಿತ ಮಂಡಳಿ ತೀರ್ಮಾನಿಸಿದ ಹಿನ್ನೆಲೆಯಲ್ಲಿ ಕ್ರೀಡಾಕೂಟವನ್ನು ಇದರೊಂದಿಗೆ ಉದ್ಘಾಟಿಸಲಾಗಿದೆ. ಮೂರು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ ಎಂದರು.

ಈ ಸಂದರ್ಭ ಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಪ್ಪಣಮಾಡ ನಿವ್ಯ ಕಾವೇರಮ್ಮ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಿ, ಜಿಲ್ಲಾ ಶಿಕ್ಷಣಾಧಿಕಾರಿ ಗಾಯತ್ರಿ ಬಿ.ಆರ್. ಕ್ಷೇತ್ರ ಶಿಕ್ಷಣಾಧಿಕಾರಿ (ಪ್ರಬಾರ) ರವಿ ಹಾಗೂ ಪ್ರಮುಖರು ಪಾಲ್ಗೊಂಡಿದ್ದರು.

-ಹರೀಶ್ ಮಾದಪ್ಪ