ಮಡಿಕೇರಿ, ಸೆ. ೧೮: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘವು ೨೦೨೩-೨೪ನೇ ಸಾಲಿನಲ್ಲಿ ರೂ.೨೮.೯೦ ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಸಂಘದಲ್ಲಿ ೯೨೧೭ಮಂದಿ ಸದಸ್ಯರಿದ್ದು, ಈ ಪೈಕಿ ೨೯೦೩ ಮಂದಿ ಅಪೂರ್ಣ ಪಾಲು ಹಣ ಹೊಂದಿದವರಾಗಿದ್ದಾರೆ. ಆರ್ಥಿಕ ವರ್ಷಾಂತ್ಯಕ್ಕೆ ಸದಸ್ಯರಿಂದ ರೂ.೧೨೬.೬೬ಲಕ್ಷ ಹಾಗೂ ರಾಜ್ಯ ಸರಕಾರದ ರೂ. ೩೦೪.೭೮ ಲಕ್ಷ ಸೇರಿದಂತೆ ಒಟ್ಟು ರೂ. ೪೩೧.೪೪ ಲಕ್ಷ ಪಾಲು ಬಂಡವಾಳ ಹೊಂದಿರುತ್ತದೆ. ಸಂಘವು ಹುಣಸೂರಿನಲ್ಲಿ ಪೆಟ್ರೋಲ್ ಬಂಕ್, ಹೆಬ್ಬಾಲೆಯಲ್ಲಿ ಉದ್ದಿಮೆ, ಕಾಫಿ ಪುಡಿ ಘಟಕ, ಕಾಫಿ ಸಂಸ್ಕರಣಾ ಘಟಕ, ಜೇನು ಮಾರಾಟ ವ್ಯವಹಾರ ನಡೆಸುತ್ತಿದ್ದು, ಹೆಚ್ಚುವರಿ ಕಟ್ಟಡಗಳನ್ನು ಬಾಡಿಗೆಗೆ ನೀಡುತ್ತಿರುವದರಿಂದ ಸಂಘಕ್ಕೆ ಆದಾಯ ಬರುತ್ತಿದೆ. ಹಾಗಾಗಿ ಸಂಘವು ಪ್ರಸ್ತುತ ಸಾಲಿನಲ್ಲಿ ಹುಣಸೂರು ವ್ಯಾಪಾರ ವಹಿವಾಟಿ ನಿಂದ ರೂ.೪೫.೫೨ ಲಕ್ಷ, ಹೆಬ್ಬಾಲೆ ಉದ್ದಿಮೆ ವ್ಯಾಪಾರ ವಹಿವಾಟಿನಿಂದ ೧೪.೧೨ ಲಕ್ಷ

(ಮೊದಲ ಪುಟದಿಂದ) ಹಾಗೂ ಮುಖ್ಯ ಕಚೇರಿಯ ವಹಿವಾಟಿನಿಂದಾಗಿ ಒಟ್ಟಾಗಿ ೨೮.೯೦ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

ಸಾಲದ ವಿವರ : ಸಂಘವು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ರೂ. ೧೧೪.೪೭ ಲಕ್ಷ ಸಾಲ ಪಡೆದಿದ್ದು, ಒಡಂಬಡಿಕೆಯAತೆ ಕಂತಿನಲ್ಲಿ ಪ್ರತಿ ತಿಂಗಳು ರೂ.೩.೧೧ ಲಕ್ಷದಂತೆ ಮರು ಪಾವತಿ ಮಾಡಲಾಗುತ್ತಿದೆ. ಸರಕಾರದಿಂದ ರೂ.೬೭.೫೨ ಲಕ್ಷ ಪಡೆದುಕೊಂಡಿದ್ದು, ಇದಕ್ಕೆ ರೂ.೧೩೬.೪೨ಲಕ್ಷ ಬಡ್ಡಿ ವಿಧಿಸಲಾಗಿದೆ. ಈ ಬಗ್ಗೆ ಸಂಘದ ಮೂಲಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರೂ. ೫೦ ಲಕ್ಷ ಠೇವಣಿ ಇಟ್ಟು ತಡೆಯಾಜ್ಞೆ ತರಲಾಗಿದೆ. ಸಂಘದ ೨೩ ಸದಸ್ಯರಿಂದ ರೂ.೨೦.೬೫ಲಕ್ಷ ಸಾಲ ಬರಲು ಬಾಕಿ ಇದೆ ಎಂದು ಮಾಹಿತಿ ನೀಡಿದರು.

ನಷ್ಟದ ವಿವರ: ವರದಿ ಸಾಲಿನ ಲಾಭಾಂಶ ಕಳೆದು ವರ್ಷಾಂತ್ಯಕ್ಕೆ ರೂ.೧೩೧೩.೫೯ ಲಕ್ಷ ಕ್ರೋಢೀಕೃತ ನಷ್ಟದಲ್ಲಿ ಮುಂದುವರೆಯುತ್ತಿದೆ. ಇದು ಈ ಹಿಂದಿನ ಸಾಲವಾಗಿದ್ದು, ಹಂತ ಹಂತವಾಗಿ ಕಡಿಮೆಯಾಗುತ್ತಾ ಬರುತ್ತಿದೆ ಎಂದು ತಿಳಿಸಿದರು.

ಅಭಿವೃದ್ಧಿ ಕೆಲಸಗಳು : ಸಂಘದ ಮೂಲಕ ಹುಣಸೂರು ಉದ್ದಿಮೆಯ ಪೆಟ್ರೋಲ್ ಬಂಕ್‌ನಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆ, ಗ್ಯಾಸ್ ಬಂಕ್ ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ. ವೀರಾಜಪೇಟೆ, ಅಮ್ಮತ್ತಿಯಲ್ಲಿರುವ ಸಂಘದ ನಿವೇಶನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಮಡಿಕೇರಿಯ ಕಾಫಿ ಕೃಪಾ ಕಟ್ಟಡಕ್ಕೆ ಒತ್ತಿಕೊಂಡಿರುವAತೆ ಮಳಿಗೆ ನಿರ್ಮಾಣ ಮಾಡಲಾಗಿದೆ ಎಂದು ದೇವಯ್ಯ ತಿಳಿಸಿದರು.

ಕಾಫಿ ವ್ಯಾಪಾರ ಕಷ್ಟಕರ : ಸಂಘದ ಮೂಲಕ ಕಾಫಿ ವ್ಯಾಪಾರ ಮಾಡುವಂತೆ ಸಲಹೆಗಳು ಕೇಳಿ ಬರುತ್ತಿವೆ. ಆದರೆ, ಮಾರುಕಟ್ಟೆಯಲ್ಲಿ ಏರು ಪೇರಾಗುತ್ತಿರುವುದರಿಂದ ಕಾಫಿ ವ್ಯಾಪಾರ ಕಷ್ಟಕರವಾಗಲಿದೆ. ಖಾಸಗಿ ವ್ಯಾಪಾರಿಗಳೊಂದಿಗೆ ಪೈಪೋಟಿ ನಡೆಸಲೂ ಸಾಧ್ಯವಾಗುವುದಿಲ್ಲ. ಒಂದು ವೇಳೆ ಮಾಡಿದರೆ ಸಂಘ ಮತ್ತೊಮ್ಮೆ ಅಧೋಗತಿಗೆ ಇಳಿಯುವ ಸಾಧ್ಯತೆಯಿದೆ ಎಂದು ಹೇಳಿದರು. ಸಂಘವು ನಷ್ಟದಲ್ಲಿದ್ದರೂ ಯಾವದೇ ಸರಕಾರಗಳು ಒಂದು ನಯಾ ಪೈಸೆ ಕೂಡ ಸಹಕಾರ ಮಾಡಿಲ್ಲವೆಂದು ಇದೇ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿದರು.

೨೦ರಂದು ಮಹಾಸಭೆ : ಸಂಘದ ವಾರ್ಷಿಕ ಮಹಾಸಭೆ ತಾ.೨೦ರಂದು ಬೆಳಿಗ್ಗೆ ೧೧ ಗಂಟೆಗೆ ಮಡಿಕೇರಿಯ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ದೇವಯ್ಯ ತಿಳಿಸಿದರು.

ಗೋಷ್ಠಿಯಲ್ಲಿ ನಿರ್ದೇಶಕರುಗಳಾದ ನಾಯಕಂಡ ಅಯ್ಯಣ್ಣ, ನಾಪಂಡ ರವಿ ಕಾಳಪ್ಪ, ಚಟ್ರಂಡ ಲೀಲಾ ಮೇದಪ್ಪ, ಎಂ.ಎA.ಧರ್ಮಾವತಿ, ವ್ಯವಸ್ಥಾಪಕ ನಾಣಯ್ಯ ಇದ್ದರು.