ಮಡಿಕೇರಿ, ಸೆ. ೧೮: ಕೊಡಗು ಜಿಲ್ಲಾ ಸಹಕಾರ ಯೂನಿಯನ್ ೨೦೨೩-೨೪ ನೇ ಸಾಲಿನ ಹಾಗೂ ೫೭ ನೇ ವಾರ್ಷಿಕ ಮಹಾಸಭೆಯನ್ನು ಯೂನಿಯನ್‌ನ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪರವರ ಅಧ್ಯಕ್ಷತೆಯಲ್ಲಿ ಯೂನಿಯನ್ ಸಭಾಂಗಣದಲ್ಲಿ ನಡೆಸಲಾಯಿತು.

ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪರವರು ಮಾತನಾಡಿ, ಶಿಕ್ಷಣ, ತರಬೇತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜಿಸುತ್ತಿರುವ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವಿಶೇಷವಾಗಿ ಪರಿಶಿಷ್ಟ ಜಾತಿ/ವರ್ಗ, ಮಹಿಳೆಯರಿಗೆ ತಪ್ಪದೇ ಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಸಹಕಾರ ಕ್ಷೇತ್ರಕ್ಕೆ ಆಯ್ಕೆಯಾದ ನಿರ್ದೇಶಕರು ಶಿಕ್ಷಣ, ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಬAಧಿಸಿದ ಜ್ಞಾನವನ್ನು ಪಡೆಯುವುದಷ್ಟೇ ಅಲ್ಲದೆ ಅರಿತ ವಿಚಾರವನ್ನು ಕಾರ್ಯಗತಗೊಳಿಸಬೇಕು. ಹಾಗಿದ್ದಲ್ಲಿ ಸಂಸ್ಥೆಯು ಉತ್ತಮ ಹಿಡಿತದೊಂದಿಗೆ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ. ಮಹಾಸಭೆಗೆ ಹಾಜರಾಗದೆ ಕೇವಲ ಊಟದ ಭತ್ಯೆಗಾಗಿ ಮಾತ್ರ ತೆರಳುವುದರಿಂದ ಸಂಘಗಳು ಶೋಚನೀಯ ಪರಿಸ್ಥಿತಿಗೆ ತಲುಪುತ್ತಿವೆ. ಅಂತೆಯೇ ಸಂಘಗಳಿಗೆ ನಮ್ಮ ಪರಿಣಾಮಕಾರಿ ಕೊಡುಗೆಯನ್ನು ನೀಡಬೇಕು. ಸಹಕಾರ ಕ್ಷೇತ್ರದಿಂದ ಮಾತ್ರವೇ ಆರ್ಥಿಕ ಅಭಿವೃದ್ಧಿ ಮತ್ತು ಭಾರತವು ಪ್ರಪಂಚದ ೩ನೇ ಆರ್ಥಿಕ ಶಕ್ತಿಯಾಗಲು ಸಹಕಾರ ಕ್ಷೇತ್ರದಿಂದಲೇ ಸಾಧ್ಯವೆಂದು ನಮ್ಮ ದೇಶದ ಪ್ರಧಾನಮಂತ್ರಿಗಳು ಮನಗಂಡು ಇತ್ತೀಚೆಗೆ ಸಹಕಾರ ಸಚಿವಾಲಯವನ್ನು ಪ್ರಾರಂಭಿಸಿ ಹಲವಾರು ಯೋಜನೆಗಳಿಗೆ ಕಾರ್ಯಗತಗೊಳಿಸುವ ಹೆಜ್ಜೆ ಇಟ್ಟಿದ್ದಾರೆ. ಅದೇ ಉದ್ದೇಶಗಳೊಂದಿಗೆ ನಡೆದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಲವು ವಿಧದ ಸೇವೆಗಳನ್ನು ನೀಡುವ ಮೂಲಕ ಗ್ರಾಮೀಣ ಭಾಗದ ಜನರ ಕಣ್ಮಣಿ ಎನಿಸಬಹುದು. ಸದಸ್ಯರು ಸಕ್ರಿಯರಾದರೆ ಸಂಘವು ಏಳಿಗೆ ಹೊಂದುತ್ತದೆ. ಅಂತೆಯೇ ದೇಶದ ಅಭಿವೃದ್ಧಿಯು ಸಾಧ್ಯವಾಗುತ್ತದೆ ಎಂದು ನುಡಿದರು.

ಮಹಾಸಭೆಯಲ್ಲಿ ಯೂನಿಯನ್ ದತ್ತಿನಿಧಿ ಹೆಚ್ಚಿಸುವ ಕುರಿತು, ದವಸ ಭಂಡಾರಗಳ ಅಭಿವೃದ್ಧಿ, ಪುನಶ್ಚೇತನ, ಸಹಕಾರ ಇಲಾಖೆಯಲ್ಲಿ ಲೆಕ್ಕಪರಿಶೋಧನಾ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ, ಬೆಳೆನಷ್ಟ, ಜಿಲ್ಲೆಯ ರಸ್ತೆಗಳು ಹಾಳಾಗಿರುವ ಕುರಿತು ಚರ್ಚಿಸಿ ಮನವಿ ಸಲ್ಲಿಸುವಂತೆ, ಇತ್ಯಾದಿ ವಿಷಯಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.

ಯೂನಿಯನ್ ನಿರ್ದೇಶಕ ಕೆ.ಎಂ. ತಮ್ಮಯ್ಯ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ವಂದಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಪಿ.ಸಿ. ಮನು ರಾಮಚಂದ್ರ, ನಿರ್ದೇಶಕರಾದ ಬಿ.ಎ. ರಮೇಶ್ ಚಂಗಪ್ಪ, ಎನ್. ಎ ರವಿ ಬಸಪ್ಪ, ಸಿ.ಎಸ್. ಕೃಷ್ಣ ಗಣಪತಿ, ಪಿ.ವಿ. ಭರತ್, ಎನ್.ಎ. ಉಮೇಶ್ ಉತ್ತಪ್ಪ, ಪಿ.ಸಿ. ಅಚ್ಚಯ್ಯ, ಪಿ.ಬಿ. ಯತೀಶ್, ವಿ.ಕೆ. ಅಜಯ್ ಕುಮಾರ್, ಎ.ಎಸ್. ಶ್ಯಾಮ್‌ಚಂದ್ರ, ಎನ್.ಎ. ಮಾದಯ್ಯ, ಎಚ್.ಎಂ. ರಮೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಯೂನಿಯನ್ ವ್ಯವಸ್ಥಾಪಕಿ ಆರ್. ಮಂಜುಳ ನೆರವೇರಿಸಿದರು.