ಕಣಿವೆ, ಸೆ. ೧೮: ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಬಳಿಯ ಕಾವೇರಿ ನದಿಯ ನೆರೆಪೀಡಿತ ತೆಪ್ಪದ ಕಂಡಿಯ ನಿವಾಸಿಗಳಿಗೆ ಬದಲೀ ಸೂರು ವ್ಯವಸ್ಥೆ ಕಲ್ಪಿಸಲು ಬಳ್ಳೂರು ಗ್ರಾಮದಲ್ಲಿ ೨.೫೦ ಎಕರೆ ಭೂಮಿ ಯನ್ನು ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ತಿಳಿಸಿದರು. ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಸಕ್ತ ಸಾಲಿನ ಮೊದಲ ಸುತ್ತಿನ ಗ್ರಾಮ ಸಭೆಯಲ್ಲಿ ತೆಪ್ಪದಕಂಡಿಯ ನಿವಾಸಿಗಳು ಎತ್ತಿದ ಪ್ರಶ್ನೆಗಳಿಗೆ ಪಿಡಿಓ ಸುಮೇಶ್ ಉತ್ತರಿಸಿದರು.
ಸಭೆಯಲ್ಲಿ ಚೆಸ್ಕಾಂ, ಆರೋಗ್ಯ ಇಲಾಖೆ, ಪಂಚಾಯತ್ ರಾಜ್, ನೀರಾವರಿ, ಕಂದಾಯ, ಪಶು ಪಾಲನಾ, ಅರಣ್ಯ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಪಂಚಾಯಿತಿ ವ್ಯಾಪ್ತಿಯ ಅತ್ತೂರು ಗ್ರಾಮದಲ್ಲಿ ನೀರಾವರಿ ನಿಗಮದಿಂದ ರೂ. ೬೮ ಲಕ್ಷ ವೆಚ್ಚದ ನೀರು ನಿರ್ವಹಣಾ ಕಾಮಗಾರಿ ಪೂರ್ಣಗೊಂಡಿದ್ದರೂ ಸಹ ವಿದ್ಯುತ್ ಇಲಾಖೆಯವರು ಕಳೆದ ನಾಲ್ಕು ವರ್ಷಗಳಿಂದ ಕಾಮಗಾರಿಯ ಮಾಹಿತಿ ನೀಡುತ್ತಿಲ್ಲ. ಗ್ರಾಮ ಪಂಚಾಯಿತಿಗೆ ಪೂರ್ಣ ಗೊಂಡ ಕಾಮಗಾರಿಯನ್ನೂ ಹಸ್ತಾಂತರಿಸಿಲ್ಲ ಎಂದು ಗ್ರಾಮಸ್ಥರಾದ ರವಿ, ನಿಗಮದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ರಸುಲ್ಪುರ ಗ್ರಾಮದ ಸರ್ವೆ ನಂಬರ್ ೪೯/೧ ರ ೧೧ ಹೆಕ್ಟೇರ್ ಪ್ರದೇಶವನ್ನು ಅರಣ್ಯ ಇಲಾಖೆಯಿಂದ ಮೀಸಲು ಅರಣ್ಯ ಎಂದು ಘೋಷಿಸುವ ಕುರಿತು ಪ್ರಕಟಣೆ ಹೊರಡಿಸಿದ್ದು, ಈ ಬಗ್ಗೆ ಗ್ರಾಮ ಸಭೆಯಲ್ಲಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿ ಆಕ್ಷೇಪಣೆ ಸಲ್ಲಿಸುವಂತೆ ತೀರ್ಮಾನಿಸಿತು.
ಬಸವನಹಳ್ಳಿ ಗ್ರಾಮದ ಜೇನು ಕುರುಬರ ಮಹೇಶ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಕಾರಿ ಆಸ್ತಿಯಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದು, ಆ ಕಟ್ಟಡಗಳನ್ನು ಏಕೆ ತೆರವುಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಈ ಬಗ್ಗೆ ಗ್ರಾಮ ಪಂಚಾಯಿತಿ ವತಿಯಿಂದ ಕಟ್ಟಡಗಳನ್ನು ತೆರವುಗೊಳಿಸಲು ಕೂಡಲೇ ಕ್ರಮ ವಹಿಸಲಾಗುವುದು ಎಂದು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಸುಮೇಶ್ ಮಾಹಿತಿ ನೀಡಿದರು.
ಅತ್ತೂರು ಗ್ರಾಮವನ್ನು ಗ್ರಾಮ ಠಾಣಾ ಎಂದು ಘೋಷಣೆ ಮಾಡಿದ್ದು ಇದುವರೆಗೂ ಸಹ ಗ್ರಾಮ ಪಂಚಾಯಿತಿಗೆ ಗ್ರಾಮ ಠಾಣಾವನ್ನು ಹಸ್ತಾಂತರಿಸಿಲ್ಲ ಎಂದು ಅತ್ತೂರು ಗ್ರಾಮದ ರವಿ ಹಾಗೂ ಜಗ ಅವರು ಪ್ರಸ್ತಾಪಿಸಿದರು. ಈ ಬಗ್ಗೆ ಕ್ರಮ ವಹಿಸಿ ಸರ್ವೇ ಮಾಡಿ ಗ್ರಾಮಾಠಾಣವನ್ನು ಹಸ್ತಾಂತರಿಸಲು ಕ್ರಮವಹಿಸಲಾಗುವು ದೆಂದು ಗ್ರಾಮ ಆಡಳಿತ ಅಧಿಕಾರಿ ಮಾಹಿತಿ ನೀಡಿದರು.
ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಮಾದಪ್ಪ, ಸದಸ್ಯರಾದ ಉಷಾ, ಶಿವಪ್ಪ, ಪ್ರವೀಣ್, ಸೌಮ್ಯ, ನಂದಿನಿ ಸೇರಿದಂತೆ ಇತರ ಸದಸ್ಯರಿದ್ದರು. ಕಾರ್ಯದರ್ಶಿ ಕುಮಾರಸ್ವಾಮಿ ಸ್ವಾಗತಿಸಿದರು.