ಮಡಿಕೇರಿ, ಸೆ. ೧೮: ಕಸ್ತೂರಿರಂಗನ್ ವರದಿಯನ್ನು ಅನುಷ್ಠಾನಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಪಂಚಾಯಿತಿ ಮಟ್ಟದಿಂದಲೇ ನಿರ್ಣಯ ಕೈಗೊಳ್ಳಲು ಇಂದು ನಡೆದ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಮಿತಿಯ ಅಧ್ಯಕ್ಷ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ಸುದರ್ಶನ ಅತಿಥಿ ಗೃಹದಲ್ಲಿ ನಡೆದÀ ಸಭೆಯಲ್ಲಿ ಕಸ್ತೂರಿರಂಗನ್ ವರದಿ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಗ್ರಾ.ಪಂ.ಗಳಲ್ಲಿ ಇದರ ವಿರುದ್ಧ ಸಭೆ ನಡೆಸಿ ವಿರೋಧಿ ನಿರ್ಣಯ ಕೈಗೊಂಡು ಮತ್ತೊಮ್ಮೆ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವಾಲಯಕ್ಕೆ ಸಲ್ಲಿಸಲು ನಿರ್ಧರಿಸಲಾಯಿತು. ಕೇಂದ್ರ ಸರ್ಕಾರ ಕಸ್ತೂರಿರಂಗನ್ ವರದಿ ಜಾರಿ ಸಂಬAಧ ೬ನೇ ಕರಡು ಅಧಿಸೂಚನೆಯನ್ನು ಹೊರಡಿಸಿರುವ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಇಂದಿನ ಈ ಸಭೆಯಲ್ಲಿ ತಾ. ೧೯ರಂದು (ಇಂದು) ಬೆಂಗಳೂರಿನಲ್ಲಿ ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಕಸ್ತೂರಿರಂಗನ್ ವರದಿ ಕುರಿತ ಸಭೆಯಲ್ಲಿ
(ಮೊದಲ ಪುಟದಿಂದ) ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿ ವತಿಯಿಂದ ಪಾಲ್ಗೊಂಡು ರಾಜ್ಯ ಸರ್ಕಾರ ಈ ವರದಿ ಜಾರಿಗೆ ಒಪ್ಪಿಗೆ ಸೂಚಿಸದಂತೆ ಒತ್ತಾಯಿಸಲು ಕೂಡ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ವರದಿ ವ್ಯಾಪ್ತಿಗೊಳಪಡುವ ಜಿಲ್ಲೆಗಳ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರಮುಖರನ್ನು ಒಳಗೊಂಡು ಸಮಿತಿ ರಚಿಸಿ ಕಸ್ತೂರಿರಂಗನ್ ವರದಿ ವಿರುದ್ಧ ರಾಜಕೀಯ ರಹಿತವಾಗಿ ತೀವ್ರ ಹೋರಾಟ ನಡೆಸಲು ನಿರ್ಧರಿಸಲಾಯಿತು.
ಒಂದು ವೇಳೆ ಹೋರಾಟಕ್ಕೆ ಕೇಂದ್ರ ಸರ್ಕಾರದಿಂದ ಸ್ಪಂದನ ಸಿಗದಿದ್ದರೆ ಕಾನೂನಿನ ಮೋರೆ ಹೋಗಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಸಮಿತಿಯ ಸಂಚಾಲಕ ಧರ್ಮಜ ಉತ್ತಪ್ಪ, ಪ್ರಮುಖರಾದ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ವಿಶ್ವನಾಥ್, ನಂದಾ ಸುಬ್ಬಯ್ಯ, ರಾಜಾ ತಿಮ್ಮಯ್ಯ, ಮನು ಸೋಮಯ್ಯ, ಸುಭಾಶ್, ರವಿ ಕಾಳಪ್ಪ, ಮತ್ತಿತರರು ಹಾಜರಿದ್ದರು.