ಕಣಿವೆ, ಸೆ. ೧೬: ಗರ್ಭಿಣಿಯರು, ಬಾಣಂತಿಯರು ಹಾಗೂ ಕಿಶೋರಿಯರಿಗೆ ಜಾಗೃತಿ ಮೂಡಿಸುವಂತಹ ಕೆಲಸ ತುರ್ತಾಗಿ ಆಗಬೇಕೆಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ತಿಳಿಸಿದರು.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯನಗರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಮಾತನಾಡಿ, ಪ್ರತಿ ಹೋಬಳಿ ಹಂತದಲ್ಲೂ ಇಂತಹ ಜಾಗೃತಿ ಕಾರ್ಯಕ್ರಮಗಳು ಆಯೋಜನೆ ಮಾಡುವುದರಿಂದ ಸಮಾಜದಲ್ಲಿ ಇರುವಂತಹ ಅಪೌಷ್ಟಿಕತೆಯನ್ನು ಕಡಿಮೆ ಮಾಡಿ ಅವರಿಗೆ ಗುಣಮಟ್ಟದ ಆಹಾರ ನೀಡಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲ ವಾಗುತ್ತದೆ. ತಿಂಗಳ ಕಾಲ ನಡೆಯುವಂತಹ ಈ ಕಾರ್ಯಕ್ರಮದಲ್ಲಿ ಅಪೌಷ್ಟಿಕತೆಯನ್ನು ಕಡಿಮೆ ಮಾಡಿ ಬಾಣಂತಿ ಗರ್ಭಿಣಿಯರು ಹಾಗೂ ಮಕ್ಕಳಿಗೆ ಉತ್ತಮ ಆರೋಗ್ಯ ನೀಡುವುದು ನಮ್ಮೆಲ್ಲರ ಗುರಿಯಾಗಬೇಕು ಎಂದರು.
ನಂತರ ಆಶಾ ಕಾರ್ಯಕರ್ತೆ ಗೀತಾ ಮಾತನಾಡಿ, ಇತ್ತೀಚೆಗೆ ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿರುವುದನ್ನ ಹೆಚ್ಚು ಕಾಣಬಹುದು ಹಾಗೂ ಬೀದಿ ಬದಿಯಲ್ಲಿ ಮಾರುವ ಜಂಕ್ ಫುಡ್ ಪದಾರ್ಥಗಳು ಸೇವನೆಯಿಂದಾಗಿ ಮನುಷ್ಯನ ಆರೋಗ್ಯದಲ್ಲಿ ಬಹಳಷ್ಟು ಗಂಭೀರ ಸ್ವರೂಪ ಸಮಸ್ಯೆಗಳು ಉಲ್ಬಣಿಸುತ್ತಿವೆ ಎಂದರು. ಸಾವಯವ ಪದ್ಧತಿಯಲ್ಲಿ ಬೆಳೆಯುವ ತರಕಾರಿ, ಹಣ್ಣು ಹಂಪಲುಗಳನ್ನು ತಿಂದು ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದು ಅವರು ಕೋರಿದರು.
ಸುಂದರನಗರ ಅಂಗನವಾಡಿ ಶಿಕ್ಷಕಿ ಭೋಜಮ್ಮ, ಜನತಾ ಕಾಲೋನಿ ಅಂಗನವಾಡಿ ಶಿಕ್ಷಕಿ ಭಾರತಿ, ದೊಡ್ಡತ್ತೂರು ಅಂಗನವಾಡಿಯ ಶೋಭಾ, ವಿಜಯನಗರ ಅಂಗನವಾಡಿಯ ನಾಗಮಣಿ, ನವಗ್ರಾಮ ಅಂಗನವಾಡಿ ಕಲಾವತಿ, ಕೂಡುಮಂಗಳೂರು ಅಂಗನವಾಡಿಯ ಸೌಮ್ಯ, ಹಾರಂಗಿ ಅಂಗನವಾಡಿಯ ಮಂಜುಳಾ, ಸುಂದರನಗರ ಅಂಗನವಾಡಿ ಭೋಜಮ್ಮ, ಚಿಕ್ಕತ್ತೂರು ಅಂಗನವಾಡಿ ಸುಶೀಲಾ, ಬಸವನತ್ತೂರು ಅಂಗನವಾಡಿಯ ರುಕ್ಮಿಣಿ, ಆಶಾ ಕಾರ್ಯಕರ್ತೆ ಗೀತಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಹಾಜರಿದ್ದರು.