ಸೋಮವಾರಪೇಟೆ, ಸೆ. ೧೬ : ವೈವಾಹಿಕ ಜೀವನದಲ್ಲಿ ವೈಮನಸ್ಸು ಉಂಟಾಗಿ ಕಾನೂನಿನ ಮೂಲಕ ಬೇರ್ಪಡಲು ಮುಂದಾಗಿದ್ದ ಜೋಡಿಗಳು ನ್ಯಾಯಾಲಯದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಮತ್ತೆ ಒಂದಾದ ಘಟನೆ ಸೋಮವಾರಪೇಟೆ ನ್ಯಾಯಾಲಯದಲ್ಲಿ ನಡೆದಿದೆ.
ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನ ಪಡೆಯಲು ಮುಂದಾಗಿದ್ದವರು ನ್ಯಾಯಾಧೀಶರು, ವಕೀಲರುಗಳ ಶ್ರಮದಿಂದಾಗಿ ಮತ್ತೆ ಒಂದಾಗಿದ್ದು, ಕಹಿ ಘಟನೆಗಳನ್ನು ಮರೆತು ಹೊಸ ಜೀವನ ಆರಂಭಿಸಲು ಅಡಿಯಿಟ್ಟಿದ್ದಾರೆ.
ವಕೀಲರಾದ ಪವಿತ್ರ ಹೆಚ್.ಆರ್. ಅವರು ವಕಾಲತ್ತು ವಹಿಸಿ ನಡೆಸುತ್ತಿದ್ದ ತೋಳೂರುಶೆಟ್ಟಳ್ಳಿಯ ಪ್ರಕರಣವೊಂದರಲ್ಲಿ ದಂಪತಿಯರು ಪರಸ್ಪರ ಸಹಮತದ ವಿಚ್ಛೇದನ ಬಯಸಿದ್ದರು. ಆರಂಭದಲ್ಲಿಯೂ ಸಾಕಷ್ಟು ತಿಳುವಳಿಕೆ ನೀಡಿ ಹೊಂದಿಕೊAಡು ಹೋಗುವಂತೆ ತಿಳಿಸಲಾಗಿತ್ತು. ಆದರೂ ದಂಪತಿ ಒಪ್ಪಿರಲಿಲ್ಲ. ಅಲ್ಲದೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ನಂತರ ನ್ಯಾಯಾಲಯದ ಮೆಟ್ಟಿಲು ಏರಿದರೂ ಸಹ, ವಕೀಲರಾದ ಪವಿತ್ರರವರು ದಂಪತಿಯರನ್ನು ಒಂದುಗೂಡಿಸುವ ಪ್ರಯತ್ನವನ್ನು ಕೈ ಬಿಟ್ಟಿರಲಿಲ್ಲ. ಅದರ ಫಲವಾಗಿ ಸೋಮವಾರಪೇಟೆಯ ಹಿರಿಯ ಶ್ರೇಣಿಯ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ನಲ್ಲಿ ನ್ಯಾಯಾಧೀಶರಾದ ರೇಖಾ ಅವರ ಸಮ್ಮುಖದಲ್ಲಿ ಪವಿತ್ರ ಅವರು ಸಂಧಾನಕಾರ್ತಿಯಾಗಿ ಕರ್ತವ್ಯ ನಿರ್ವಹಿಸಿ ಈ ಜೋಡಿಯನ್ನು ಮತ್ತೆ ಒಂದಾಗಿಸಿದ್ದಾರೆ.
ಮತ್ತೊAದು ಪ್ರಕರಣದಲ್ಲಿ ತಲ್ತರೆಶೆಟ್ಟಳ್ಳಿ ಗ್ರಾಮದ ದಂಪತಿ ವಿಚ್ಚೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದು, ವಕೀಲರಾದ ಮನೋಹರ್ ಅವರು ವಕಾಲತ್ತು ವಹಿಸಿದ್ದರು. ಈ ಪ್ರಕರಣದಲ್ಲಿಯೂ ಸಹ ನ್ಯಾಯಾಧೀಶರಾದ ರೇಖಾ, ಸಂಧಾನಕಾರ್ತಿ ಪವಿತ್ರ, ವಕೀಲರಾದ ಮನೋಹರ್ ಅವರುಗಳ ಪರಿಶ್ರಮದಿಂದ ಮತ್ತೆ ದಂಪತಿ ಒಂದಾಗಿದ್ದು, ಹಳೆಯ ವೈಮನಸ್ಸು ಮರೆತು, ನ್ಯಾಯಾಲಯದಲ್ಲಿಯೇ ಪರಸ್ಪರ ಹಾರ ಬದಲಿಸಿಕೊಳ್ಳುವ ಮೂಲಕ ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ.