ಹೆಬ್ಬಾಲೆ, ಸೆ. ೧೬: ತಾಲೂಕಿನ ನಲ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.

ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಎನ್.ಎಂ. ಸತೀಶ್ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಹಾಕಿದ ರೈತರಾದ ಎಂ.ಬಿ. ಜಯಣ್ಣ, ಎನ್.ಎಸ್. ಗಣೇಶ್ ಹಾಗೂ ರವಿಚಂದ್ರ ಅವರನ್ನು ಸನ್ಮಾನಿಸಿ ಗೌರವಿಸಿದರು. ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ನೀಡಿ ಗೌರವಿಸಲಾಯಿತು.

ಸಭೆಯ ಮೊದಲಿಗೆ ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಿ ಮೌನಾಚರಣೆ ನಡೆಸಲಾಯಿತು. ಸಂಘದ ಕಾರ್ಯದರ್ಶಿ ಎನ್.ಸಿ. ನಟರಾಜು ಅವರು ಹಿಂದಿನ ಸಾಲಿನ ಮಹಾಸಭೆ ನಡಾವಳಿಕೆ ವಾಚಿಸಿದರು. ಹಾಸನ ಹಾಲು ಒಕ್ಕೂಟದ ವಿಸ್ತಾರಣಾಧಿಕಾರಿ ಬಿ.ವಿ. ವೀಣಾ ಸಂಘದ ೨೦೨೩-೨೪ನೇ ಸಾಲಿನ ಆಡಿಟ್ ವರದಿ ವಾಚಿಸಿದರು.

ಸಂಘಕ್ಕೆ ಪ್ರಸಕ್ತ ಸಾಲಿನಲ್ಲಿ ರೂ.೫ ಲಕ್ಷ ನಷ್ಟ ಉಂಟಾಗಿರುವ ಬಗ್ಗೆ ಸಭೆಯಲ್ಲಿ ಸದಸ್ಯರು ಹಾಗೂ ಆಡಳಿತ ಮಂಡಳಿ ನಡುವೆ ತೀವ್ರ ಚರ್ಚೆ ನಡೆಯಿತು.

ಸದಸ್ಯರು ಸಂಘದ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು. ನಿರ್ದೇಶಕ ಜವರೇಗೌಡ ಮಾತನಾಡಿ, ಸಂಘದ ಹಾಲು ತೆಗೆದುಕೊಳ್ಳುವಾಗ ಸರಿಯಾಗಿರುವ ಡಿಗ್ರಿ ನಂತರ ಕೂಡಿಗೆ ಡೈರಿಗೆ ಹೋದ ನಂತರ ಕಡಿಮೆ ಉತ್ಕೃಷ್ಟತೆಯನ್ನು ಹೊಂದಿದೆ ಎಂಬ ವರದಿ ಬರುತ್ತಿದೆ.

ಇದರಿಂದ ರೈತರಿಗೆ ತುಂಬ ನಷ್ಟ ಉಂಟಾಗುತ್ತಿದೆ. ಕೂಡಿಗೆ ಡೈರಿಯ ವರದಿ ಬಗ್ಗೆ ನಮಗೆ ಅನುಮಾನವಿದೆ ಎಂದು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು. ಸದಸ್ಯರಾದ ಶಿವಮೂರ್ತಿ, ನಾಗೇಶ್ ಮಾತನಾಡಿ, ರೈತರು ತರುವ ಹಾಲನ್ನು ತಿರಸ್ಕರಿಸುತ್ತಿರುವುದರಿಂದ ಖಾಸಗಿ ಡೈರಿಗೆ ಹಾಲು ಕೊಡುವ ಪರಿಸ್ಥಿತಿ ಉಂಟಾಗಿದೆ ಎಂದು ಕಾರ್ಯದರ್ಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹಾಲಿನ ಗುಣಮಟ್ಟದ ವಿಚಾರ ಪರಸ್ಪರ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿ ಸಭೆ ಗೊಂದಲದ ಗೂಡಾಯಿತು. ಸದಸ್ಯರ ಟೀಕೆಗಳಿಂದ ಮನನೊಂದ ಅಧ್ಯಕ್ಷ ಸತೀಶ್ ಸಭೆಯಿಂದ ಹೊರನಡೆದ ಪ್ರಸಂಗ ಕೂಡ ನಡೆಯಿತು.

ಸಭೆಯಲ್ಲಿದ್ದ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ೩೯ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಎಲ್ಲಾ ಸಂಘಗಳಿAದಲೂ ಉತ್ತಮ ಗುಣಮಟ್ಟದ ಹಾಲು ಕೂಡಿಗೆ ಡೈರಿಗೆ ಬರುತ್ತಿದೆ. ಆದರೆ ನಲ್ಲೂರು ಸಂಘದ ಹಾಲು ಮಾತ್ರ ಕಡಿಮೆ ಗುಣಮಟ್ಟವನ್ನು ಹೊಂದಿದೆ ಎಂಬ ವರದಿ ಬರುತ್ತಿದೆ.ಈ ಬಗ್ಗೆ ರೈತರೆ ತಮ್ಮ ಹಸುವಿನ ಹಾಲು ತೆಗೆದುಕೊಂಡು ಬಂದು ಕೂಡಿಗೆ ಡೈರಿಯಲ್ಲಿ ಪರೀಕ್ಷಿಸಲಿ ನಾನು ಕೂಡ ರೈತರೊಂದಿಗೆ ಬರುತ್ತೇನೆ.

ವರದಿಯಲ್ಲಿ ಲೋಪ ಕಂಡುಬAದಲ್ಲಿ ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು. ಮೊದಲು ಎಲ್ಲಿ ತಪ್ಪಾಗುತ್ತಿದೆ ಎಂಬುದನ್ನು ರೈತರು ಮನಗಣಬೇಕು. ಗುಣಮಟ್ಟದ ಹಾಲು ಉತ್ಪಾದನೆಯು ಹಸುವಿನ ಆರೋಗ್ಯವನ್ನು ಅವಲಂಬಿಸಿರುತ್ತದೆ, ಹಸುಗಳು ಆರೋಗ್ಯವಾಗಿರಬೇಕಾದರೆ ಎಲ್ಲಾ ಪೋಷಕಾಂಶಗಳನ್ನೊಳಗೊAಡ ಸಮತೋಲನ ಆಹಾರ ನೀಡುವುದು ಅತ್ಯವಶ್ಯಕ ವಾಗಿರುತ್ತದೆ.

ಹಸು ತಿನ್ನುವ ಆಹಾರದಲ್ಲಿರುವ ಅಂಶಗಳು ಹಾಲಿನಲ್ಲಿ ಬರುವುದರಿಂದ ಹಸುವಿಗೆ ನೀಡುವ ಆಹಾರವು ಗುಣಮಟ್ಟದಿಂದ ಕೂಡಿರುವುದು ಅವಶ್ಯಕ. ಎಲ್ಲಾ ಕ್ಷೇತ್ರಗಳಂತೆ ಹೈನುಗಾರಿಕೆ ಕ್ಷೇತ್ರದಲ್ಲೂ ತೀವ್ರವಾದ ಸ್ಪರ್ಧೆ ಏರ್ಪಟ್ಟಿದೆ. ಖಾಸಗಿ ಡೈರಿಗಳ ತೀವ್ರ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಿ ನಮ್ಮ ಸಹಕಾರ ಸಂಘಗಳು ಉಳಿಯಬೇಕಾದರೆ ಗುಣಮಟ್ಟದ ಹಾಲನ್ನು ಪೂರೈಸಬೇಕು ಎಂದು ರೈತರಿಗೆ ಸಲಹೆ ನೀಡಿದರು. ರೈತರು ಗುಣಮಟ್ಟದ ಹಾಲು ಹಾಕಿದರೆ ಮಾತ್ರ ಸಂಘದ ಬೆಳವಣಿಗೆ ಸಾಧ್ಯ. ಜೊತೆಗೆ ರೈತರ ಅಭಿವೃದ್ಧಿ ಕೂಡ ಸಾಧ್ಯವಾಗುತ್ತಿದೆ. ಹಾಲು ಡೈರಿಯಿಂದ ಹೈನುಗಾರಿಕೆ ಪ್ರೋತ್ಸಾಹ ದೊರೆಯುತ್ತದೆ. ಸಾಲ ಸೌಲಭ್ಯಗಳು ಕೂಡ ಸಿಗಲಿವೆ. ಈ ಎಲ್ಲಾ ಸೌಲಭ್ಯಗಳನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ನಲ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷೆ ಸುನಂದ, ನಿರ್ದೇಶಕರಾದ ಜವರೇಗೌಡ, ಎನ್.ಸಿ. ಶ್ರೀಧರ್, ಎನ್.ಬಿ. ರಾಜಪ್ಪ, ಎನ್.ಎನ್. ಪ್ರಸನ್ನ, ಲೀಲಾ, ಗಾಯಿತ್ರಿ, ಪುಟ್ಟ ಲಕ್ಷö್ಮಮ್ಮ ಹಾಗೂ ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಪಾರ್ಥ ಭಾಗವಹಿಸಿದ್ದರು.