ಕುಶಾಲನಗರ, ಸೆ. ೧೪: ವಾಹನ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆಗೆ ತೆರಳಿದ ಗಾಯಾಳುವಿಗೆ ತಕ್ಷಣ ಸ್ಪಂದಿಸದ ವೈದ್ಯರ ವರ್ತನೆಯನ್ನು ಸ್ಥಳೀಯ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿ ಕರ್ತವ್ಯದಲ್ಲಿದ್ದ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಶುಕ್ರವಾರ ರಾತ್ರಿ ೧೧ ಗಂಟೆ ವೇಳೆಗೆ ಕುಶಾಲನಗರ ಪಟ್ಟಣದ ಹೆದ್ದಾರಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಿಲೀಪ್ ಎಂಬವರಿಗೆ ಕಾರೊಂದು ಡಿಕ್ಕಿಪಡಿಸಿ ಪರಾರಿಯಾಗಿದ್ದು, ಬೈಕ್ ಸವಾರ ತೀವ್ರ ಗಾಯಗೊಂಡು ಕುಶಾಲನಗರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ ಸಂದರ್ಭ ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯರು ಚಿಕಿತ್ಸೆ ನೀಡಲು ತಡ ಮಾಡಿರುವ ಬಗ್ಗೆ ಆರೋಪಗಳು ಕೇಳಿ ಬಂದವು.

ಈ ಸಂದರ್ಭ ಮಾಹಿತಿ ತಿಳಿದು ಆಸ್ಪತ್ರೆಗೆ ಆಗಮಿಸಿದ ಕುಶಾಲನಗರ ಪುರಸಭೆ ಸದಸ್ಯ ಹಾಗೂ ಆಸ್ಪತ್ರೆಯ ರಕ್ಷಾ ಸಮಿತಿ ಸದಸ್ಯ ಆನಂದಕುಮಾರ್ ವೈದ್ಯರ ಬಳಿ ಮನವಿ ಮಾಡಿದರೂ ಯಾವುದೇ ರೀತಿಯ ಸ್ಪಂದನ ಲಭಿಸಿಲ್ಲ.

ನಂತರ ವಿಷಯ ತಿಳಿದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್ ಆಗಮಿಸಿ ಕರ್ತವ್ಯ ನಿರತ ವೈದ್ಯರನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ಗಾಯಾಳುವಿಗೆ ಚಿಕಿತ್ಸೆ ನೀಡುವಂತೆ ಸೂಚಿಸಿದರು.

ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ವೈದ್ಯರಿಗೆ ಸಲಹೆ ನೀಡಿ ದರು. ಪ್ರಕರಣದ ಬಗ್ಗೆ ಮಾಹಿತಿಯನ್ನು ಸಮು ದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಧುಸೂದನ್ ಅವರ ಗಮನಕ್ಕೂ ತರಲಾಯಿತು.