ಕುಶಾಲನಗರ, ಸೆ. ೧೪: ಜೀವನದಿ ಕಾವೇರಿ ಮೂಲದಿಂದಲೇ ಮಲಿನಗೊಳ್ಳುತ್ತಿರುವ ಬಗ್ಗೆ ತಾಂತ್ರಿಕ ಸಮಿತಿಯು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿದೆ.
ದಕ್ಷಿಣ ಭಾರತದ ಜೀವನದಿ ಕಾವೇರಿ ಬೆಂಗಳೂರು ಮೈಸೂರು ಸೇರಿದಂತೆ ಹಲವು ನಗರಗಳ ಸಾವಿರಾರು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಪ್ರಮುಖ ಮೂಲವಾಗಿದ್ದು, ಈ ಬಗ್ಗೆ ಸರ್ಕಾರ ವಿಶೇಷ ಸಮಿತಿ ಒಂದನ್ನು ರಚಿಸಿ ವರದಿ ಸಲ್ಲಿಸಲು ಸೂಚಿಸಿತ್ತು.
ಸಮಿತಿಯು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಸಿದ್ಧಪಡಿಸಿದ ಕರಡು ವರದಿಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೇಂದ್ರ ಕಚೇರಿ ಮೂಲಕ ಸರ್ಕಾರಕ್ಕೆ ಸಲ್ಲಿಸಿದೆ.
ಮಾಲಿನ್ಯ ತಪ್ಪಿಸಲು ಯಾವ ರೀತಿಯ ಕ್ರಿಯಾಯೋಜನೆಗಳನ್ನು ರೂಪಿಸಬೇಕು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಲಿನ ನೀರು ನದಿಗಳಿಗೆ ಸೇರದಂತೆ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಕಾರ್ಖಾನೆಗಳಿಂದ ತ್ಯಾಜ್ಯವನ್ನು ಸಮರ್ಪಕವಾಗಿ ಸಂಸ್ಕರಿಸದೆ ನೇರವಾಗಿ ನದಿಗೆ ಹರಿಸುತ್ತಿರುವುದು, ಕೃಷಿ ತ್ಯಾಜ್ಯ, ಬಯಲು ಶೌಚ, ಪಟ್ಟಣ ಮತ್ತು ನಗರ ಪ್ರದೇಶಗಳ ತ್ಯಾಜ್ಯ ಗಣನೀಯವಾಗಿ ನದಿ ಒಡಲು ಸೇರುತ್ತಿದ್ದು ಇವು ಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಚರಂಡಿ ನೀರು ನದಿಯಲ್ಲಿ ಸೇರುತ್ತಿರುವ ಪ್ರದೇಶಗಳು ಹಾಗೂ ಅವುಗಳನ್ನು ತಡೆಗಟ್ಟಲು ಮಾಡಬೇಕಾದ ಕ್ರಮಗಳನ್ನು ವರದಿಯಲ್ಲಿ ಸಮಗ್ರವಾಗಿ ತಿಳಿಸಲಾಗಿದೆ.
ಸ್ಥಳೀಯ ಸಂಸ್ಥೆಗಳು, ಮಂಡಳಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸೇರಿದಂತೆ ಪ್ರತಿಯೊಂದು ಸಂಸ್ಥೆಯ ಪಾತ್ರದ ಬಗ್ಗೆ ಕೂಡ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
ಕಾವೇರಿ ನದಿಗೆ ಕೊಳಚೆ ನೀರು ನೇರವಾಗಿ ಮಿಶ್ರಣವಾಗುತ್ತಿದ್ದು, ಇದನ್ನು ತಡೆಯಲು ಕ್ರಮಕೈಗೊಳ್ಳುವ ಅಗತ್ಯವಿದೆ, ಪರಿಶೀಲನೆಗೆ ತಾಂತ್ರಿಕ ಪರಿಣಿತರ ಸಮಿತಿ ರಚಿಸಬೇಕು ಈ ವರದಿ ಆಧಾರದಲ್ಲಿ ಸರ್ಕಾರ ಸೂಕ್ತ ಕ್ರಮ ವಹಿಸಬೇಕು ಎಂದು ಮಂಡ್ಯ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದರು.
ಕೊಡಗು ಜಿಲ್ಲೆಯ ಭಾಗಮಂಡಲದ ಭಾಗದಿಂದ ಮೂಲ ಕಾವೇರಿಯಲ್ಲಿ ನದಿ ಬಹುತೇಕ ಕಲುಷಿತಗೊಳ್ಳುತ್ತಿದೆ. ಮುಂದೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಂತರ ಹಾಸನ, ಮೈಸೂರು, ಮಂಡ್ಯ, ನಂಜನಗೂಡು, ಟಿ. ನರಸೀಪುರ ಮುಂತಾದೆಡೆ ಕಾರ್ಖಾನೆಗಳ ತ್ಯಾಜ್ಯವನ್ನು ನೇರವಾಗಿ ನದಿಗೆ ಹರಿಸುತ್ತಿರುವ ಬಗ್ಗೆ ವರದಿಯಲ್ಲಿ ಸಮಗ್ರ ಮಾಹಿತಿ ನೀಡಲಾಗಿದೆ.
ಒಳಚರಂಡಿ ನೀರಿನಿಂದಲೂ ಕಲುಷಿತಗೊಂಡು ನದಿ ಮಲಿನಗೊಳ್ಳುತ್ತಿದೆ. ಈ ಮೂಲಕ ನದಿಯಲ್ಲಿರುವ ಜಲಚರಗಳ ಮಾರಣ ಹೋಮಕ್ಕೂ ಕಾರಣವಾಗುತ್ತಿದೆ. ಹಲವು ಕೈಗಾರಿಕೆಗಳ ವಿಷಕಾರಿ ತ್ಯಾಜ್ಯಗಳ ಮೂಲಕ ನದಿಥಿu ನೈಸರ್ಗಿಕ ಗುಣ ಕಳೆದುಕೊಳ್ಳುತ್ತಿದ್ದು, ಇದು ಅಪಾಯಕಾರಿ ಮತ್ತು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ವರದಿಯಲ್ಲಿ ವಾಸ್ತವ ಅಂಶವನ್ನು ಸರ್ಕಾರಕ್ಕೆ ನೀಡಲಾಗಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಖ್ಯ ಪರಿಸರ ಅಧಿಕಾರಿ ಪಿ ನಿರಂಜನ್ ಅಧ್ಯಕ್ಷತೆಯಲ್ಲಿ ರಚಿಸಿದ್ದ ತಾಂತ್ರಿಕ ಸಮಿತಿಯಲ್ಲಿ ಮಂಡಳಿಯ ಹಿರಿಯ ಅಧಿಕಾರಿಗಳು, ಪರಿಸರ ಅಧ್ಯಯನ ವಿಭಾಗದ ಮುಖ್ಯಸ್ಥರು, ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು ಸಮಿತಿಯಲ್ಲಿದ್ದು, ಕಳೆದ ೪೫ ದಿನಗಳ ಕಾಲ ಕಾವೇರಿ ನದಿಯ ವಿವಿಧ ಕಡೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ನೀರಿನ ಮಾದರಿಗಳ ವೈಜ್ಞಾನಿಕ ವಿಶ್ಲೇಷಣೆಯ ವರದಿ ಮುಂತಾದ ಅಂಶಗಳನ್ನು ಒಳಗೊಂಡು ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಜೀವನದಿ ಕಾವೇರಿ ಮೂಲ ದಿಂದಲೇ ಕಲುಷಿತಗೊಳ್ಳುತ್ತಿರುವ ಬಗ್ಗೆ ಕಳೆದ ೧೫ ವರ್ಷಗಳಿಂದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ನಿರಂತರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆದಿರುವುದನ್ನು ಇಲ್ಲಿ ಸ್ಮರಿಸಬಹುದು.
ವರದಿ- ಚಂದ್ರಮೋಹನ್