ಮಡಿಕೇರಿ, ಸೆ. ೧೪ : ಚೆನ್ನೆöÊಯಲ್ಲಿ ನಡೆಯುತ್ತಿರುವ ನಾಲ್ಕನೇ ಆವೃತ್ತಿಯ ದಕ್ಷಿಣ ಏಷ್ಯ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ರಾಜ್ಯದ ಕ್ರೀಡಾಪಟು ಕೊಡಗಿನವರಾದ ಉದಯೋನ್ಮುಖ ಪ್ರತಿಭೆ ಬೊಳ್ಳಂಡ ಉನ್ನತಿ ಅಯ್ಯಪ್ಪ ದಾಖಲೆ ನಿರ್ಮಿಸಿದ್ದಾರೆ. ತಾ. ೧೨ರಂದು ೧೦೦ ಮೀಟರ್ಸ್ ಹರ್ಡಲ್ಸ್ನಲ್ಲಿ ೧೩.೯೩ ಸೆಕೆಂಡ್ನಲ್ಲಿ ಗುರಿ ತಲುಪಿ ಚಿನ್ನದ ಪದಕಗಳಿಸಿದ್ದರೆ ನಿನ್ನೆ ಸಂಜೆ ನಡೆದ ೨೦೦ ಮೀಟರ್ಸ್ ಓಟದಲ್ಲಿ ೨೩.೯೧ ಸೆಕೆಂಡ್ನಲ್ಲಿ ಗುರಿ ತಲುಪುವುದರೊಂದಿಗೆ ಈ ಕ್ರೀಡಾಕೂಟದಲ್ಲಿ ಮತ್ತೊಂದು ಚಿನ್ನದ ಪದಕ ಗಳಿಸಿದ್ದಾರೆ. ಎರಡೂ ವಿಭಾಗದ ಸ್ಪರ್ಧೆಯಲ್ಲಿ ಉನ್ನತಿ ದಕ್ಷಿಣ ಏಷ್ಯಾ ಅಥ್ಲೆಟಿಕ್ ಕೂಟದಲ್ಲಿ ದಾಖಲೆ ನಿರ್ಮಿಸಿರುವುದು ವಿಶೇಷವಾಗಿದೆ.
ಪೊನ್ನಣ್ಣ ಶ್ಲಾಘನೆ : ಉನ್ನತಿ ಎರಡು ಚಿನ್ನದ ಪದಕ ಗಳಿಸಿದ್ದು ಇವರೊಂದಿಗೆ ೮೦೦ ಮೀಟರ್ಸ್ನಲ್ಲಿ ತೇಲಪಂಡ ಬೋಪಣ್ಣ ಕೂಡ ಕಂಚಿನ ಪದಕ ಗಳಿಸಿದ್ದು ಇವರಿಬ್ಬರ ಸಾಧನೆಗೆ ಶಾಸಕ ಪೊನ್ನಣ್ಣ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇವರಿಬ್ಬರು ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಸಾಧನೆ ತೋರಿ ನಾಡಿಗೆ ಹೆಮ್ಮೆ ತಂದಿದ್ದು ಮುಂದಿನ ದಿನಗಳಲ್ಲೂ ಸಾಧನೆ ತೋರಲಿ ಎಂದು ಸಂದೇಶ ನೀಡಿದ್ದಾರೆ.