ಮಡಿಕೇರಿ, ಸೆ. ೧೪: ವಕ್ಫ್ ಮಸೂದೆ ತಿದ್ದುಪಡಿ ವಿರೋಧಿಸಿ ನಗರದಲ್ಲಿ ಎಸ್ಡಿಪಿಐ ವತಿಯಿಂದ ಪ್ರತಿಭಟನೆ ನಡೆಯಿತು. ನಗರದ ಚೌಕಿ ವೃತ್ತದಲ್ಲಿ ಜಮಾಯಿಸಿದ ಪಕ್ಷದ ಪ್ರಮುಖರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕರ್, ಕೇಂದ್ರದ ಎನ್ಡಿಎ ಸರ್ಕಾರವು ಆಗಸ್ಟ್ ೮ರಂದು ಪಾರ್ಲಿಮೆಂಟ್ನಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದೆ. ವಕ್ಫ್ ಕಾಯ್ದೆಗೆ ಸುಮಾರು ೪೦ ತಿದ್ದುಪಡಿಗಳನ್ನು ಮಾಡುವ ಮೂಲಕ ಇಡೀ ವಕ್ಫ್ ಕಾಯಿದೆಯನ್ನು ನಾಶಗೊಳಿಸಲು ಮುಂದಾಗಿದ್ದು, ಇದು ಸಂವಿಧಾನ ವಿರೋಧಿ ಕ್ರಮ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಕ್ಫ್ ಆಸ್ತಿಯು ಸರ್ಕಾರ ಮಂಜೂರು ಮಾಡಿದ ಆಸ್ತಿಯಲ್ಲ. ಸಮುದಾಯದ ಗಣ್ಯರು ಸಮುದಾಯದ ಉನ್ನತಿಗಾಗಿ ದಾನವಾಗಿ ನೀಡಿರುವ ಆಸ್ತಿಯಾಗಿದೆ. ತಿದ್ದುಪಡಿ ಮಸೂದೆ ಜಾರಿಗೊಳಿಸಲು ಬಿಡುವುದಿಲ್ಲ ಎಂದಿರುವ ಅಬ್ದುಲ್ ಅಡ್ಕರ್, ವಕ್ಫ್ ಆಸ್ತಿಯನ್ನು ಕಬಳಿಸಿ ಕೊಂಡು ಬಂಡವಾಳಶಾಹಿಗಳಿಗೆ ಮಾರಾಟ ಮಾಡುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಪಕ್ಷದ ಜಿಲ್ಲಾ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ಕಾನೂನು ಬದ್ಧವಾಗಿ ಜಾರಿಯಲ್ಲಿರುವ ಕಾಯಿದೆ ತಿದ್ದುಪಡಿ ಅವಶ್ಯಕತೆಯಿಲ್ಲ. ಪೂರ್ಣ ಬಹುಮತದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ಶೇ.೯೫ರಷ್ಟು ಮುಸಲ್ಮಾನರು ಕಾಂಗ್ರೆಸ್ಗೆ ಮತ ನೀಡಿದ್ದಾರೆ. ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳದೆ ಮಸೂದೆಯ ವಿರುದ್ಧ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕೆಂದು ಆಗ್ರಹಿಸಿದರು. ಎನ್ಡಿಎ ಮೈತ್ರಿಕೂಟದ ಪಕ್ಷಗಳೇ ಇದರ ವಿರುದ್ಧವಿವೆ. ತಿದ್ದುಪಡಿ ಮಸೂದೆ ಹಿಂಪಡೆಯದಿದ್ದರೆ ಸರ್ಕಾರ ಅಸ್ಥಿರತೆಗೆ ತಲುಪುತ್ತದೆ. ಕಾನೂನುಬದ್ದ ಹೋರಾಟದ ಜೊತೆಗೆ ದೇಶವ್ಯಾಪಿ ಬೀದಿಗಿಳಿದು ಹೋರಾಟ ನಡೆಲಾಗುವುದೆಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಸ್ಡಿಪಿಐ ನಗರಸಭೆ ಸದಸ್ಯ ಮನ್ಸೂರ್ ಆಲಿ, ಪಕ್ಷದ ನಗರಾಧ್ಯಕ್ಷ ರಿಜ್ವಾನ್, ಜಾಮಿಯಾ ಮಸೀದಿ ಮಾಜಿ ಅಧ್ಯಕ್ಷ ನಸೀರ್ ಅಹಮ್ಮದ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.