ಇಂದು ಈದ್ ಮಿಲಾದ್
ಇಸ್ಲಾಮಿನ ಮೂಲಕ ವಿಶ್ವಕ್ಕೆ ಪರಿಚಿತವಾದ ದೇವನ ಅಂತಿಮ ಪ್ರವಾದಿ ಮುಹಮ್ಮದ್(ಸ)ರವರನ್ನು ಸ್ಮರಿಸುವಂತಹ ಸಂದರ್ಭ ನಮಗೆಲ್ಲರಿಗೂ ಮತ್ತೊಮ್ಮೆ ಬಂದೊದಗಿದೆ. ೧೯ನೇ ಶತಮಾನದ ತತ್ವ ಜ್ಞಾನಿಯೊಬ್ಬರು ಪ್ರವಾದಿಯವರನ್ನು ಬಣ್ಣಿಸುತ್ತಾ ಹೀಗೆಂದಿದ್ದರು, “ಅತ್ಯಂತ ವಿಭಿನ್ನವಾದ ಸನ್ನಿವೇಶದಲ್ಲಿ ಮಾನವ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಕರ್ಮನಿರತರಾಗುವ ಪ್ರತಿಯೊಬ್ಬರಿಗೂ ಅನುಕರಿಸಲು ಯೋಗ್ಯವಾದ ವ್ಯಕ್ತಿಯೊಬ್ಬರಿದ್ದರೆ ಅದು ಪ್ರವಾದಿ ಮುಹಮ್ಮದ್ (ಸ) ಮಾತ್ರ”. ಪ್ರವಾದಿ ಮುಹಮ್ಮದ್(ಸ)ರವರು ಜಗತ್ತು ಕಂಡ ಇತರ ಎಲ್ಲಾ ಸುಧಾರಕರಿಗಿಂತ ಮತ್ತು ಧಾರ್ಮಿಕ ನಾಯಕರುಗಳಿಗಿಂತ ಭಿನ್ನ ಹಾಗೂ ವ್ಯತಿರಿಕ್ತರಾಗುತ್ತಾರೆ. ಅವರು ಒಬ್ಬ ಮಾದರಿ ಸಮಾಜ ಸುಧಾರಕರಾಗಿ, ಸಮಾಜ ಸೇವಕರಾಗಿ, ಶಿಕ್ಷಕರಾಗಿ, ಆಡಳಿತಗಾರರಾಗಿ, ಸೇನಾನಾಯಕರಾಗಿ, ಮಾದರಿ ಸಂಸಾರದ ನಾಯಕರಾಗಿ, ಪ್ರಾಮಾಣಿಕ ವ್ಯವಹಾರಗಾರರಾಗಿ ನಮ್ಮ ಮುಂದೆ ಕಾಣಿಸುತ್ತಾರೆ. ಮಕ್ಕಾ ವಿಜಯದ ಸಂದರ್ಭದಲ್ಲಿ ತಮ್ಮ ಸೈನಿಕರು ಬಂಧನಕ್ಕೊಳಪಡಿಸಿದ ಶತ್ರುಗಳನ್ನು ದಾಕ್ಷಿಣ್ಯದಿಂದ ಕ್ಷಮಿಸುವ ಪ್ರವಾದಿಗಳ ಗುಣ ಇಂದಿನ ಸಾಮ್ರಾಜ್ಯ ಶಾಹಿಗಳಿಗೆ ಅನುಕರಣ ಯೋಗ್ಯವಾಗಿದೆ.
ಪ್ರವಾದಿ ಮುಹಮ್ಮದ್(ಸ) ರವರನ್ನು ನಿಷ್ಪಕ್ಷವಾಗಿ ಅಧ್ಯಯನ ಮಾಡಲು ಹೊರಟ ಎಲ್ಲಾ ಇತಿಹಾಸಕಾರರೂ ಪ್ರವಾದಿಯವರ ಅನುಪಮ ವ್ಯಕ್ತಿತ್ವದ ಮುಂದೆ ಮೂಕವಿಸ್ಮಿತರಾಗುವುದು ಸಹಜ. ಪ್ರವಾದಿ ಮುಹಮ್ಮದ್(ಸ)ರ ಬಗ್ಗೆ ಅಧ್ಯಯನ ನಡೆಸಲು ಇತಿಹಾಸದ ಇತರ ಮಹಾ ವ್ಯಕ್ತಿಗಳನ್ನು ಅಧ್ಯಯನ ಮಾಡಲು ಉಪಯೋಗಿಸುವ ಮಾನದಂಡ ಅಪರ್ಯಾಪ್ತವಾಗುತ್ತದೆ. ಇತಿಹಾಸ ಪರಿಚಯಿಸಿದ ಇತರ ಮಹಾ ಪುರುಷರೂ, ಕ್ರಾಂತಿಕಾರಿಗಳೂ, ಸುಧಾರಕರೂ ಮಾನವ ಜೀವನದ ಕೆಲವೇ ಕೆಲವು ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿ ಕಾರ್ಯ ನಿರ್ವಹಿಸಿದರು. ಅವರು ಪ್ರಚಾರ ಪಡಿಸಿದ ಸಿದ್ದಾಂತಗಳು ಮತ್ತು ಆಶಯಗಳು ಸಮಾಜವನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಾಗುವಂತದ್ದು ಆಗಿರಲಿಲ್ಲ. ಪ್ರವಾದಿ ಮುಹಮ್ಮದ್(ಸ) ರವರ ವ್ಯಕ್ತಿತ್ವದಂತೆಯೇ ಅವರು ತಂದ ಪರಿವರ್ತನೆಯೂ ಎಲ್ಲಾ ಅರ್ಥದಲ್ಲೂ ಸಮಗ್ರ ಮತ್ತು ಸಂಪೂರ್ಣವಾಗಿತ್ತು. ಪ್ರವಾದಿಯವರ ಬಗ್ಗೆ ಅಧ್ಯಯನ ನಡೆಸಿದ ಎಲ್ಲಾ ಇತಿಹಾಸಕಾರರನ್ನೂ ಸಂಶೋಧಕರನ್ನೂ ಈ ಪರಿಪೂರ್ಣತೆ ಮತ್ತು ಸಮಗ್ರತೆ ವಿಸ್ಮಯಗೊಳಿಸಿತು.
ಧರ್ಮವನ್ನು ಕೇವಲ ಅಧ್ಯಾತ್ಮಿಕ ಅನುಭವವಾಗಿ ಕಾಣುವವರಿಗೆ ಪ್ರವಾದಿ ಮುಹಮ್ಮದ್(ಸ)ರವರನ್ನು ಸಂಪೂರ್ಣವಾಗಿ ಅರಿತುಕೊಳ್ಳಲು ಸಾಧ್ಯವಿಲ್ಲ. ಅವರು ಪರಿಚಯಿಸಿ ಪ್ರಚಾರ ಪಡಿಸಿದ ಮತ್ತು ಕಾರ್ಯರೂಪಕ್ಕೆ ತಂದ ಧರ್ಮ ಮಾನವ ಬದುಕಿನ ಸಮಗ್ರ ದರ್ಶನ ಮತ್ತು ವ್ಯವಸ್ಥೆಯಾಗಿತ್ತು. ಅವರು ಮನುಷ್ಯ ಬದುಕಿನ ಅಧ್ಯಾತ್ಮಿಕ ಮತ್ತು ಲೌಕಿಕ ಅಂಶಗಳನ್ನು ಸಂಯೋಜನೆಗೊಳಿಸಿದರು. ಇದು ಅವರ ಗಮನಾರ್ಹವಾದ ವಿಶೇಷತೆಯಾಗಿತ್ತು. ಅಧ್ಯಾತ್ಮಿಕತೆಯ ಮೂಲಕ ಲೌಕಿಕ ಬದುಕನ್ನು ಸಂಸ್ಕರಿಸಬೇಕೆAದು ಎಲ್ಲಾ ಧರ್ಮಗಳೂ ಪ್ರತಿಪಾದಿಸುತ್ತವೆ. ಆದರೆ ಇದನ್ನು ಯಶಸ್ವಿಯಾಗಿ ಮಾಡಿ ತೋರಿಸಿದವರು ಪ್ರವಾದಿ ಮುಹಮ್ಮದ್(ಸ). ಇದು ಅವರ ಅಪೂರ್ವ ಸಾಧನೆಗಳಲ್ಲಿ ಒಂದಾಗಿತ್ತು. ಇಸ್ಲಾಮಿನ ಪ್ರತಿಯೊಂದು ನಿರ್ದೇಶನಗಳ ಒಟ್ಟು ಅರ್ಥ ಈ ಏಕೈಕ ಗುರಿಯನ್ನು ಸಾಕ್ಷಾತ್ಕಾರಗೊಳಿಸುವುದಾಗಿತ್ತು. ಉದಾಹರಣೆಗೆ ತೌಹೀದ್ (ಏಕದೇವ ವಿಶ್ವಾಸ) ಎಂಬುದು ಇಸ್ಲಾಮಿನ ಮೂಲಭೂತ ವಿಶ್ವಾಸಗಳಲ್ಲಿ ಒಂದು. ಆದರೆ ಇಸ್ಲಾಮಿನ ಏಕದೇವತ್ವ ಕಲ್ಪನೆ ಕೇವಲ ವಿಗ್ರಹಾರಾಧನೆಯನ್ನು ವಿರೋಧಿಸಲಿಕ್ಕೆ ಮಾತ್ರವಾಗಿರಲಿಲ್ಲ. ಬದುಕಿನ ನಿಖಿಲ ಕ್ಷೇತ್ರಗಳಲ್ಲೂ ದೇವನನ್ನೂ ಪಾಲಕ ಪ್ರಭುವನ್ನಾಗಿ ಅಂಗೀಕರಿಸುವುದು ಇದರ ಅರ್ಥವಾಗಿದೆ.
ಮುಹಮ್ಮದ್ (ಸ)ರವರು ಇಸ್ಲಾಮ್ ಧರ್ಮದ ಸಂಸ್ಥಾಪಕರಲ್ಲ, ಅಂತೆಯೇ ಅವರು ಯಾವುದೇ ಹೊಸ ಧರ್ಮಕ್ಕೆ ನಾಂದಿ ಹಾಡಿದವರಲ್ಲ. ಗತ ಪ್ರವಾದಿಗಳಂತೆ ಅವರು ಓರ್ವ ಧರ್ಮ ಸುಧಾರಕರಾಗಿದ್ದಾರೆ ಮತ್ತು ಅವರು ತಾನು ಹೊಸ ದೇವನಿಂದ ನೂತನವಾದ ಸಂದೇಶದೊAದಿಗೆ ಬಂದಿರುವೆನೆAದು ವಾದಿಸಿದವರಲ್ಲ. ನಿಜವಾದ ದೇವನ ಕುರಿತು ತನ್ನ ಸಮಕಾಲೀನರಲ್ಲಿದ್ದ ತಪ್ಪು ಮತ್ತು ಅವರು ಮರೆತು ಹೋಗಿದ್ದ ಜೀವನ ವ್ಯವಸ್ಥೆಯ ಕಡೆಗೆ ಆಹ್ವಾನಿಸುವ ಕೆಲಸವನ್ನು ಪ್ರವಾದಿಗಳು ಮಾಡಿದರು.
ಇಸ್ಲಾಂ ಎಂಬುದು ಪ್ರವಾದಿ ಮುಹಮ್ಮದ್ರವರು ಹುಟ್ಟು ಹಾಕಿದ ಧರ್ಮವೆಂದೂ ಕುರ್ಆನ್ ಎಂಬುದು ಪ್ರವಾದಿ ಮುಹಮ್ಮದ್ ವಿರಚಿತ ಗ್ರಂಥವೆAದೂ ದೃಢವಾಗಿ ನಂಬುವ ಅದೆಷ್ಟೋ ಇತಿಹಾಸಗಾರರು ಮತ್ತು ಬುದ್ಧಿಜೀವಿಗಳು ಎಂದೆನಿಸಿಕೊAಡವರು ಇಂದೂ ನಮ್ಮೊಳಗೆ ಇದ್ದಾರೆ. ಪ್ರವಾದಿ ಮುಹಮ್ಮದ್ (ಸ) ನಿರಕ್ಷರಿಯಾಗಿದ್ದರು ಎಂಬುದು ಅನಿಷೇಧ್ಯ ವಾಸ್ತವಿಕತೆಯಾಗಿದೆ. ಅಕ್ಷರಜ್ಞಾನವಿಲ್ಲದ ಒಬ್ಬ ಮನುಷ್ಯನಿಗೆ ಅದೃಶ್ಯ ಜ್ಞಾನದ ಅಭಾವದಲ್ಲಿ ನಿಸ್ತೂಲವಾದ ಒಂದು ಗ್ರಂಥವನ್ನು ಹೇಗೆ ರಚಿಸಲು ಸಾಧ್ಯ? ಪವಿತ್ರ ಕುರ್ಆನ್ ದೇವನ ಕಡೆಯಿಂದ ಅವತೀರ್ಣಗೊಂಡ ಸಾಕ್ಷರ ವಾಣಿಯೆಂಬುದಕ್ಕೆ ಅದರ ಪ್ರತಿಯೊಂದು ಅಕ್ಷರವೂ ನಿದರ್ಶನವಾಗಿದೆ. ಸತ್ಯಾನ್ವೇಷಕನ ಮನಸ್ಸಿನಿಂದ ಪವಿತ್ರ ಕುರ್ಆನನ್ನು ಅಧ್ಯಯನ ಮಾಡುವ ಪ್ರತಿಯೊಬ್ಬರಿಗೂ ದೇವನ ಸಾನ್ನಿಧ್ಯ ಅದರಲ್ಲಿರುವುದು ವ್ಯಕ್ತವಾಗುತ್ತದೆ. ಪವಿತ್ರ ಕುರ್ಆನ್ ಎಂಬುದು ದಿವ್ಯವಾಣಿ (ವಹ್ಯ್) ಮೂಲಕ ಪ್ರವಾದಿ ಮುಹಮ್ಮದರಿಗೆ ದೇವನ ಕಡೆಯಿಂದ ಅವತೀರ್ಣವಾದ ದೇವ ವಚನಗಳಾಗಿವೆ. ಪ್ರವಾದಿಯವರು ತಮಗೆ ಲಭಿಸಿದ ಆದ್ಯಾತ್ಮಿಕ ಅನುಭವವನ್ನು ಮತ್ತು ದಿವ್ಯವಾಣಿಯನ್ನು ಒಂದು ಜೀವನ ಪದ್ಧತಿಯಾಗಿ ಜನರ ಮುಂದೆ ಸಮರ್ಪಿಸಿದರು. ಪ್ರವಾದಿಗಳ ಬಗ್ಗೆ ಸ್ತುತಿ ಗೀತೆಗಳನ್ನು ಹಾಡುವುದರೊಂದಿಗೆ ಕರ್ಮ ಜೀವನದಲ್ಲಿ ಅವರನ್ನು ಕಡೆಗಣಿಸುವ ಕೆಲಸ ಇಂದು ಮುಸ್ಲಿಂ ಸಮಾಜ ಮಾಡುತ್ತಿದೆ. ಸ್ವಂತ ಬದುಕಿನ ಮೂಲಕ ಪ್ರವಾದಿಗಳ ಸಂದೇಶವನ್ನು ಪ್ರಚಾರ ಮಾಡಬೇಕಾದವರು ಪ್ರವಾದಿಗಳಿಗೂ ಮನುಷ್ಯರಿಗೂ ಮಧ್ಯೆ ದೊಡ್ಡ ಕಂದಕವನ್ನು ನಿರ್ಮಿಸಿರುವುದು ನಿಜಕ್ಕೂ ದುಃಖಕರ. ಅವರ ಜೀವನವು ಇತಿಹಾಸದಲ್ಲಿ ದಾಖಲಾಗಿರುವವರೆಗೆ ಅವರನ್ನು ಕಳಂಕಿತರಾಗಿಸಲು ಸಾಧ್ಯವಿಲ್ಲ.
ಇಷ್ಟೆಲ್ಲಾ ಆದರೂ ವಿಶ್ವದ ಜನತೆ ಪ್ರವಾದಿ ಮುಹಮ್ಮದ್(ಸ)ರವರನ್ನು ಹೇಗೆ ಅರಿಯಬೇಕೋ ಹಾಗೆ ಅರಿತಿಲ್ಲ ಎಂಬುದು ವಾಸ್ತವ. ಅವರ ಬಗ್ಗೆ ಅಧ್ಯಯನ ನಡೆಸಬೇಕಾದ ರೀತಿಯಲ್ಲಿ ಅಧ್ಯಯನ ನಡೆಸುತ್ತಿಲ್ಲ ಎಂಬುದು ನಿರ್ವಿವಾದವಾದ ವಿಷಯವಾಗಿದೆ. ಕೇವಲ ಪಾಶ್ಚಾತ್ಯರನ್ನು ದೂರಿ ತಮ್ಮ ಸ್ವಂತ ಕರ್ತವ್ಯಗಳಿಂದ ಹಿಂದಕ್ಕೆ ಸರಿಯಲು ಸಾಧ್ಯವಿಲ್ಲವೆಂಬುದನ್ನು ಮುಸ್ಲಿಮರು ಮನವರಿಕೆ ಮಾಡಿಕೊಳ್ಳಬೇಕು. ಇಸ್ಲಾಮನ್ನು ಸಾಮಾಜಿಕ, ರಾಜಕೀಯ, ಆರ್ಥಿಕ ವಿಮೋಚನಾ ಸಿದ್ಧಾಂತವಾಗಿ ಜನರಿಗೆ ಪರಿಚಯಿಸಿ ಅದರ ಸತ್ಫಲಗಳನ್ನು ವಿಶ್ವದ ಮುಂದೆ ಇಡದ ಹೊರತು “ಮನುಷ್ಯನ ಮುಕ್ತಿಯ ಏಕೈಕ ಮಾರ್ಗ” ಎಂಬ ಅದರ ವಾದವನ್ನು ವಿಶ್ವವು ಅಂಗೀಕರಿಸುವುದಿಲ್ಲ. ವಿಶ್ವಾಸ ಮತ್ತು ವಿಜ್ಞಾನ ಅಭಿವೃದ್ಧಿಯ ಮಂತ್ರಗಳೆAದು ಪ್ರವಾದಿಯವರು ಕಲಿಸಿದ್ದರು ಎಂಬುದನ್ನು ಮುಸ್ಲಿಮರು ಅರಿತಿರಬೇಕು. ಅವರ ಈ ಜ್ಞಾನದ ಮೂಲಕ ವಿಶ್ವವು ಪ್ರವಾದಿ ಮುಹಮ್ಮದ್(ಸ)ರವರನ್ನು ಅರಿಯಲಿ.
- ಪಿ.ಕೆ. ಅಬ್ದುಲ್ ರೆಹೆಮಾನ್, ವೀರಾಜಪೇಟೆ. ಮೊ. ೯೪೪೯೯೮೨೭೨೭