ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೇಜ್ರಿವಾಲ್

ನವದೆಹಲಿ, ಸೆ. ೧೫: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆರು ತಿಂಗಳ ಸೆರೆವಾಸದ ಬಳಿಕ ಜಾಮೀನಿನ ಮೇರೆಗೆ ಹೊರಬಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಪ್ರಕಟಿಸಿದ್ದಾರೆ. ತಿಹಾರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಪಕ್ಷದ ಕಚೇರಿಗೆ ತೆರಳಿ, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಎರಡು ದಿನಗಳ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಮತ್ತೆ ಜನಾಶೀರ್ವಾದ ಸಿಗುವವರೆಗೂ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುವುದಿಲ್ಲ ಎಂದರು. ನನಗೆ ಕಾನೂನು ನ್ಯಾಯಾಲಯದಿಂದ ನ್ಯಾಯ ಸಿಕ್ಕಿತು. ಈಗ ಜನತಾ ನ್ಯಾಯಾಲಯದಿಂದ ನ್ಯಾಯ ಸಿಗುತ್ತದೆ. ಕೇಜ್ರಿವಾಲ್ ಪ್ರಾಮಾಣಿಕನಾಗಿದ್ದರೆ ಜನರು ಮತ್ತೆ ನಡೆಯಲಿರುವ ಚುನಾವಣೆಯಲ್ಲಿ ಎ.ಎ.ಪಿ.ಗೆ ಮತ ಹಾಕಿ ಗೆಲ್ಲಿಸಲಿ, ಜನಾದೇಶದ ನಂತರವೇ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಕೇಜ್ರಿವಾಲ್ ಹೇಳಿದರು. ಬಿಜೆಪಿಯವರು, ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಿ ದೆಹಲಿಯಲ್ಲಿ ಸರ್ಕಾರ ರಚಿಸಲು ಬಯಸಿದ್ದರು. ಆದರೆ ಅವರು ನಮ್ಮ ಪಕ್ಷವನ್ನು ಒಡೆಯಲು ಸಾಧ್ಯವಾಗಲಿಲ್ಲ. ಪಕ್ಷದ ಕಾರ್ಯಕರ್ತರಿಂದ ದೂರವಾಗಲೂ ಸಾಧ್ಯವಾಗಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅವರು ರಾಜೀನಾಮೆ ನೀಡಿದ ನಂತರ ಪಕ್ಷದ ಸದಸ್ಯರನ್ನು ಮುಖ್ಯಮಂತ್ರಿ ಎಂದು ಹೆಸರಿಸಲಾಗುವುದು ಎಂದು ಹೇಳಿದರು. ಜನರ ಮಧ್ಯೆ ಹೋಗಿ ಬೆಂಬಲ ಕೇಳುತ್ತೇನೆ ಎಂದರು.

ಮುನಿರತ್ನ ೨ ದಿನ ಪೊಲೀಸ್ ಕಸ್ಟಡಿಗೆ

ತುಮಕೂರು, ಸೆ. ೧೫: ಶಾಸಕ ಮುನಿರತ್ನ ಜೊತೆಯಲ್ಲಿ ಇದ್ದವರೇ ಅವರ ವಿರುದ್ದ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಪ್ರಕಾರ ಕ್ರಮಕೈಗೊಂಡಿದ್ದಾರೆ. ಇದರಲ್ಲಿ ದ್ವೇಷ ಎಲ್ಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಪ್ರಶ್ನಿಸಿದರು. ಶಿರಾ ತಾಲೂಕಿನ ಉಜ್ಜನಕುಂಟೆ ಬಳಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಪೊಲೀಸರು ಮುನಿರತ್ನ ಅವರನ್ನು ಭಾನುವಾರ ಬೆಳಿಗ್ಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ಮುಂದಿನ ಎರಡು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ಅವರ ಧ್ವನಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್)ಕ್ಕೆ ಕಳುಹಿಸಲಾಗುತ್ತದೆ ಎಂದರು. ಅವರಿಂದ ಬೈಸಿಕೊಂಡವರೇ ಅವರ ವಿರುದ್ಧ ದೂರು ಕೊಟ್ಟಿದ್ದಾರೆ. ಇದರಲ್ಲಿ ಕಾಂಗ್ರೆಸ್ ನಾಯಕರ ಪಾತ್ರವಿಲ್ಲ. ಬಿಡುಗಡೆಯಾದ ಆಡಿಯೊಗೆ ಮುನಿರತ್ನ ಧ್ವನಿ ಹೋಲಿಕೆಯಾದರೆ ಪೊಲೀಸರು ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಗಣೇಶ ವಿಸರ್ಜನೆ ವೇಳೆ ದುರಂತ : ತಂದೆ-ಮಗ ಸೇರಿ ಮೂವರ ಸಾವು

ತುಮಕೂರು, ಸೆ. ೧೫: ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾರಸಂದ್ರ ಗ್ರಾಮ ಸಮೀಪದ ರಂಗನಹಟ್ಟಿ ಕೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ತಂದೆ, ಮಗ ಸೇರಿ ಮೂವರು ಸಾವನ್ನಪ್ಪಿರುವಂತಹ ದುರ್ಘಟನೆ ಸಂಭವಿಸಿದೆ. ಮೃತರನ್ನು ತಂದೆ ಮಗ, ೪೬ ವರ್ಷದ ರೇವಣ್ಣ, ೨೬ ವರ್ಷದ ಶರತ್ ಹಾಗೂ ದಯಾನಂದ ಎಂದು ಗುರುತಿಸಲಾಗಿದೆ. ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಮೃತದೇಹಗಳಿಗೆ ಶೋಧ ನಡೆಸಿದ್ದಾರೆ.

ಮಾಜಿ ಸಚಿವ ಖರೀದಿಸಿದ್ದ ಜಾಗ ವಶಕ್ಕೆ

ಚಿಕ್ಕಮಗಳೂರು, ಸೆ. ೧೫: ಕಾಂಗ್ರೆಸ್‌ನ ಮಾಜಿ ಸಚಿವ ಸಗೀರ್ ಅಹ್ಮದ್ ಅಕ್ರಮವಾಗಿ ಖರೀದಿಸಿದ್ದ ೩೨ ಎಕರೆ ಜಮೀನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನ ಶೋಲಾ ಅರಣ್ಯದಲ್ಲಿ ಸಗೀರ್ ಅಹ್ಮದ್ ಪತ್ನಿ ಫಾತಿಮಾಭಿ ಹೆಸರಿನಲ್ಲಿದ್ದ ೩೨.೨೧ ಎಕರೆ ಭೂಮಿಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು, ಆಸ್ತಿಯ ಮೇಲಿದ್ದ ಸಗೀರ್ ಕುಟುಂಬದ ಹಕ್ಕನ್ನು ರದ್ದುಪಡಿಸಿ, ಸರ್ಕಾರಿ ಜಮೀನು ಎಂದು ಆದೇಶ ಹೊರಡಿಸಿದ್ದಾರೆ. ಇನಾಂ ದತ್ತಾತ್ರೇಯ ಪೀಠ ಗ್ರಾಮದ ಸರ್ವೆ ನಂಬರ್ ೫ರಲ್ಲಿ ಫಾತಿಮಾಭಿ ಅವರ ಹೆಸರಿನಲ್ಲಿದ್ದ ಬಂಡಿದಾರಿ, ಕಾಲುದಾರಿ ಮೇಲಿನ ಹಕ್ಕನ್ನು ಜಿಲ್ಲಾಡಳಿತ ರದ್ದು ಮಾಡಿದೆ. ಈ ಜಮೀನು ಬೇರೆಯವರಿಗೆ ಮಂಜೂರಾಗಿತ್ತು. ಆದರೆ ೧೯೭೮ರಲ್ಲಿ ಸಗೀರ್ ತಮ್ಮ ಪತ್ನಿ ಫಾತಿಮಾಭಿ ಹೆಸರಿನಲ್ಲಿ ಅಕ್ರಮವಾಗಿ ಖರೀದಿಸಿದ್ದರು. ಆದರೆ ಈ ಮಂಜೂರಾತಿಯೇ ಅಕ್ರಮ ಎಂದು ಜಿಲ್ಲಾಡಳಿತ ಘೋಷಿಸಿದೆ. ಅಲ್ಲದೆ ಭೂಮಿ ವಶಪಡಿಸಿಕೊಂಡಿರುವುದಾಗಿ ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದ ಬಳಿಯಿರುವ ಸಗೀರ್ ಅಹ್ಮದ್ ಮನೆಯ ಬಾಗಿಲಿಗೆ ಜಿಲ್ಲಾಡಳಿತ ನೋಟಿಸ್ ಅಂಟಿಸಿದೆ.

ಸಿಎA ಕಾರ್ಯಕ್ರಮದಲ್ಲಿ ಭದ್ರತಾ ಲೋಪ-ಯುವಕ ಪೊಲೀಸ್ ವಶ

ಬೆಂಗಳೂರು, ಸೆ. ೧೫: ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಭದ್ರತಾ ಲೋಪವಾಗಿದ್ದು, ಸಿಎಂ ಇದ್ದ ಕಾರ್ಯಕ್ರಮದ ವೇದಿಕೆ ಮೇಲೆ ಯುವಕನೋರ್ವ ಜಿಗಿದ ಪರಿಣಾಮ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ವಿಧಾನಸೌಧದ ಮುಂಭಾಗ ನಡೆಯುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದ ಅಂತರರಾಷ್ಟಿçÃಯ ಪ್ರಜಾಪ್ರಭುತ್ವ ದಿನದ ಕಾರ್ಯಕ್ರಮದಲ್ಲಿ ಭದ್ರತಾ ನಿಯಮ ಉಲ್ಲಂಘನೆಯಾಗಿರುವ ಘಟನೆ ನಡೆದಿದೆ. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಯುವಕನೊಬ್ಬ ಏಕಾಏಕಿ ವೇದಿಕೆ ಮೇಲೆ ಜಿಗಿದು ಸಿದ್ದರಾಮಯ್ಯ ಅವರ ಕಡೆ ಧಾವಿಸಿ ಶಾಲು ಹೊದಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಆ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಯುವಕ ಕನಕಪುರ ಮೂಲದವನು ಎನ್ನಲಾಗಿದ್ದು, ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಶೇಖ್ ಹಸೀನಾ ವಿರುದ್ಧ ಮತ್ತೊಂದು ಕೊಲೆ ಪ್ರಕರಣ ದಾಖಲು

ಢಾಕಾ, ಸೆ. ೧೫: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಮತ್ತು ಇತರ ೫೮ ಮಂದಿ ವಿರುದ್ದ ವಿದ್ಯಾರ್ಥಿಯ ಕೊಲೆ ಯತ್ನ ಪ್ರಕರಣ ದಾಖಲಾಗಿದೆ ಎಂದು ಅಲ್ಲಿನ ಪತ್ರಿಕೆ ವರದಿ ಮಾಡಿದೆ. ೨೨ ವರ್ಷದ ಫಾಹಿಮ್ ಫೈಸಲ್ ಅವರು ಈ ಸಂಬAಧ ದೂರು ದಾಖಲಿಸಿದ್ದಾರೆ. ಆಗಸ್ಟ್ ೪ರಂದು ನಡೆದ ಸರ್ಕಾರ ವಿರೋಧಿ ಪ್ರತಿಭಟನೆ ವೇಳೆ ತಮ್ಮ ಮೇಲೆ ಗುಂಡಿನ ದಾಳಿ ನಡೆದು ಗಾಯಗೊಂಡಿದ್ದಾಗಿ ಅವರು ತಿಳಿಸಿದ್ದಾರೆ. ಇದರೊಂದಿಗೆ ಹಸೀನಾ ಅವರ ವಿರುದ್ಧ ೧೩೬ ಕೊಲೆ ಪ್ರಕರಣ ಸೇರಿದಂತೆ ಒಟ್ಟು ೧೫೫ ಪ್ರಕರಣಗಳು ದಾಖಲಾದಂತಾಗಿದೆ ಎಂದೂ ಉಲ್ಲೇಖಿಸಿದೆ.

ನಿಫಾ ಸೋಂಕಿಗೆ ಕೇರಳದ ವ್ಯಕ್ತಿ ಬಲಿ

ಮಲಪ್ಪುರಂ, ಸೆ. ೧೫: ಇತ್ತೀಚೆಗಷ್ಟೇ ಮಲಪ್ಪುರಂನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ೨೪ ವರ್ಷದ ವ್ಯಕ್ತಿಗೆ ನಿಫಾ ವೈರಸ್ ಸೋಂಕು ತಗುಲಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಪ್ರಾದೇಶಿಕ ವೈದ್ಯಾಧಿಕಾರಿ ನಡೆಸಿದ ಸಾವಿನ ತನಿಖೆ ಬಳಿಕ ನಿಫಾ ಸೋಂಕಿನ ಶಂಕೆ ವ್ಯಕ್ತವಾಗಿ ಮಾದರಿಗಳನ್ನು ತಕ್ಷಣವೇ ಪರೀಕ್ಷೆಗೆ ಕಳುಹಿಸಿದಾಗ ನಿಫಾ ದೃಢಪಟ್ಟಿತು ಎಂದು ಸಚಿವೆ ತಿಳಿಸಿದ್ದಾರೆ. ಬೆಂಗಳೂರಿನಿAದ ರಾಜ್ಯಕ್ಕೆ ಆಗಮಿಸಿದ ಮಲಪ್ಪುರಂ ಮೂಲದವರು ಕಳೆದ ಸೆಪ್ಟೆಂಬರ್ ೯ ರಂದು ನಿಧನರಾಗಿದ್ದರು. ನಂತರ ಅವರ ಲಭ್ಯವಿರುವ ಮಾದರಿಗಳನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಫಲಿತಾಂಶದಲ್ಲಿ ಪಾಸಿಟಿವ್ ಬಂದಿತ್ತು ಎಂದು ಮಲಪ್ಪುರಂ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ, ಪುಣೆಯ ರಾಷ್ಟಿçÃಯ ವೈರಾಲಜಿ ಸಂಸ್ಥೆ ಸಹ ಫಲಿತಾಂಶಗಳು ಸೋಂಕನ್ನು ದೃಢಪಡಿಸಿದೆ. ೧೬ ಸಮಿತಿಗಳನ್ನು ರಚಿಸಲಾಗಿದ್ದು, ೧೫೧ ಜನರ ಸಂಪರ್ಕ ಪಟ್ಟಿಯನ್ನು ಗುರುತಿಸಲಾಗಿದೆ. ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ವಿವಿಧ ಸ್ಥಳಗಳಿಗೆ ಪ್ರಯಾಣಿಸಿದ್ದು, ನಿಕಟ ಸಂಪರ್ಕಿತರನ್ನು ಪ್ರತ್ಯೇಕಿಸಲಾಗಿದೆ.