*ಗೋಣಿಕೊಪ್ಪ, ಸೆ. ೧೩: ಜೀವನದಲ್ಲಿ ಅಧ್ಯಾತ್ಮಿಕದಿಂದ ಸುಭದ್ರತೆಯ ಬದುಕು ನಡೆಸಲು ಸಾಧ್ಯವಾಗಬಲ್ಲದು ಎಂದು ಉಡುಪಿ ಡಿವೈನ್ ಪಾರ್ಕ್ ಅಧಿಕಾರಿ ಪೂರ್ಣಿಮ ತಿಮ್ಮೇಗೌಡ ತಿಳಿಸಿದರು.
ಶ್ರೀಮಂಗಲ ವಿವೇಕ ಜಾಗೃತಾ ಬಳಗ ವತಿಯಿಂದ ಗೋಣಿಕೊಪ್ಪ ಇಗ್ಗುತ್ತಪ್ಪ ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ ಓದುಗರ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಅಧ್ಯಾತ್ಮವನ್ನು ಯಾರು ಅಪ್ಪಿಕೊಂಡಿರುತ್ತಾರೋ ಅವರು ಜೀವನದಲ್ಲಿ ಸೋಲುವುದಿಲ್ಲ ಎಂದರು.
ಪ್ರತಿಯೊಬ್ಬ ವ್ಯಕ್ತಿಯ ಜೀವನವನ್ನು ಸುಂದರಗೊಳಿಸಲು ಒಬ್ಬ ಗುರುವಿನ ಅವಶ್ಯಕತೆ ಇದೆ. ಸದ್ಗತಿಯನ್ನು ಹೊಂದಲು ಅಂತಹ ಗುರುವನ್ನು ಹುಡುಕಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತಿನಿತ್ಯ ನಾವು ಮಾಡುವ ಕರ್ತವ್ಯಗಳ ಜೊತೆಗೆ ದೇವರ ಧ್ಯಾನಕ್ಕಾಗಿ ಕನಿಷ್ಟ ೧೦ ನಿಮಿಷಗಳನ್ನು ಮೀಸಲಿಟ್ಟರೆ ಆ ದಿನ ಪೂರ್ತಿ ನಮ್ಮ ಮನಸ್ಸು ಲವಲವಿಕೆಯಿಂದ ಇರುತ್ತದೆ ಎಂದು ಸಲಹೆ ನೀಡಿದರು.
ಸಮಿತಿ ಅಧ್ಯಕ್ಷೆ ಸುಮಿತ್ರ ಉಪಸ್ಥಿತಿಯಲ್ಲಿ ರಶ್ಮಿ ದೇವಯ್ಯ, ಕುಮಾರ್, ದೇವಯ್ಯ ಸೇರಿದಂತೆ ಸಮಿತಿ ಪದಾಧಿಕಾರಿಗಳು ಇದ್ದರು.