ಮಡಿಕೇರಿ, ಸೆ. ೧೩: ಹೊದ್ದೂರು ಕಬಡಕೇರಿ ಯುವಕ ಸಂಘದ ಆಶ್ರಯದಲ್ಲಿ ಕೈಲ್ಪೊಳ್ದ್ ಹಬ್ಬದ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ ಜರುಗಿತು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ಜಿಲ್ಲಾ ಹಾಗೂ ತಾಲೂಕು ಯುವ ಒಕ್ಕೂಟ, ಮಡಿಕೇರಿ, ಕಬಡಕೇರಿ ಯುವಕ ಸಂಘದ ಆಶ್ರಯದಲ್ಲಿ ಸಂಘದ ಮೈದಾನದಲ್ಲಿ ೪೯ನೇ ವರ್ಷದ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಯುವ ಸಿನಿಮಾ ನಟ ಚೆಟ್ಟಿಮಾಡ ಅಭಿಷೇಕ್ ಕಾರ್ಯಪ್ಪ ತೆಂಗಿನ ಕಾಯಿಗೆ ಗುಂಡು ಹೊಡೆಯು ವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಚೆಟ್ಟಿಮಾಡ ಬಾಲಕೃಷ್ಣ ಸೋಮಯ್ಯ ವಹಿಸಿದ್ದರು. ಮುಖ್ಯ ಅತಿಥಿಗ ಳಾಗಿದ್ದ ನಾಪೋಕ್ಲು ಕರ್ನಾಟಕ ಬ್ಯಾಂಕಿನಲ್ಲಿ ಹಿರಿಯ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅಮ್ಮಣಂಡ ಯು. ಪೂಣಚ್ಚ ಅವರು ಮಾತನಾಡಿ, ಸಂಸ್ಕೃತಿ - ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸಿ, ಉಳಿಸಿ ಬೆಳೆಸುವ ಕೆಲಸವನ್ನು ಹಿರಿಯರು ಮಾಡಬೇಕೆಂದರು.
ವೇದಿಕೆಯಲ್ಲಿ ಅತಿಥಿಗಳಾಗಿ ಹಿರಿಯರಾದ ಬಿ.ಜೆ. ರಾಜೀವ್, ಬೆಳೆಗಾರ ಪಟ್ರಕೋಡಿ ವಾಸು ವಾಸುದೇವ್, ಮೈಸೂರಿನ ಉದ್ಯಮಿ ಮೇಕಂಡ ಅಚ್ಚಯ್ಯ, ಸಂಘದ ಮಾಜಿ ಅಧ್ಯಕ್ಷ ಚೆಟ್ಟಿಮಾಡ ಮೊಣ್ಣಪ್ಪ ಉಪಸ್ಥಿತರಿದ್ದರು.
ಸಾಮರಸ್ಯಕ್ಕೆ ಸಾಕ್ಷಿ : ಕೈಲ್ ಪೊಳ್ದ್ ಹಬ್ಬದ ಕ್ರೀಡಾಕೂಟದಲ್ಲಿ ಸ್ಥಳೀಯ ಮುಸ್ಲಿಂ ಜನಾಂಗದವರು ಕೂಡ ಪಾಲ್ಗೊಳ್ಳುವುದರ ಮೂಲಕ ಸಾಮರಸ್ಯಕ್ಕೆ ಸಾಕ್ಷಿಯಾದರು. ಶಾಂತಿ ಪ್ರಾರ್ಥಿಸಿ, ಸಂಘದ ಹಿರಿಯ ಸದಸ್ಯ ಚೆಟ್ಟಿಮಾಡ ಲೋಕೇಶ್ ಗಣಪತಿ ಸ್ವಾಗತಿಸಿ, ಸಮಾರಂಭದಲ್ಲಿ ಅಮ್ಮಣಂಡ ಪೂಣಚ್ಚ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಯುವ ಒಕ್ಕೂಟದ ಕಾರ್ಯಾಧ್ಯಕ್ಷ ಕೂಡಂಡ ಸಾಬ ಸುಬ್ರಮಣಿ ನಿರೂಪಿಸಿ, ಸಂಘದ ಕಾರ್ಯದರ್ಶಿ ಮೇಕಂಡ ದೊರೆ ತಮ್ಮಯ್ಯ ವಂದಿಸಿದರು.