ತಾ. ೧೫ ರಂದು ಮಹಾಸಭೆ

ಸೋಮವಾರಪೇಟೆ, ಸೆ. ೧೨: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. ೧.೧೯ ಕೋಟಿ ಲಾಭ ಗಳಿಸಿದೆ. ಸಹಕಾರ ತತ್ವದ ಆಧಾರದ ಮೇಲೆ ಸದಸ್ಯರಿಗೆ ಹೆಚ್ಚು ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಸಂಘದ ಅಧ್ಯಕ್ಷೆ ರೂಪಾ ಸತೀಶ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನೋತ್ಸವ ಆಚರಿಸಿ ೧೦೫ನೇ ವರ್ಷದತ್ತ ಹೆಜ್ಜೆ ಹಾಕಿರುವ ಸಹಕಾರ ಸಂಘದಲ್ಲಿ ೫೨೦೯ ಮಂದಿ ಸದಸ್ಯರಿದ್ದು, ಪ್ರಸಕ್ತ ಅವಧಿಯಲ್ಲಿ ೩೦೦ ಮಂದಿ ನೂತನವಾಗಿ ಸದಸ್ಯರಾಗಿದ್ದಾರೆ. ರೂ. ೩೮೦ ಕೋಟಿ ವ್ಯವಹಾರ ಮಾಡಲಾಗಿದ್ದು, ೧.೧೯ ಕೋಟಿ ನಿವ್ವಳ ಲಾಭ ಗಳಿಸಿದೆ ಎಂದರು.

ಸAಘದ ವಾರ್ಷಿಕ ಮಹಾಸಭೆ ತಾ. ೧೫ರಂದು ಪೂರ್ವಾಹ್ನ ೧೦ ಗಂಟೆಗೆ ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯಲಿದೆ. ಸಂಘದ ಒಟ್ಟು ದುಡಿಯುವ ಬಂಡವಾಳ ೭೭.೨೬ ಕೋಟಿಯಾಗಿದೆ. ಸಂಘದಲ್ಲಿ ಜಾಮೀನು ಸಾಲದ ವಿಮಾ ಯೋಜನೆ, ಪಿಗ್ಮಿ ಓವರ್‌ಡ್ರಾಫ್ಟ್ ಸಾಲದ ವಿಮಾ ಯೋಜನೆ, ಸ್ವಸಹಾಯ ಮತ್ತು ಜಂಟಿ ಭಾದ್ಯತಾ ಗುಂಪುಗಳ ಯೋಜನೆಯನ್ನು ರೂಪಿಸಲಾಗಿದೆ. ಹಿಂದಿನಿAದ ಇಲ್ಲಿಯವರೆಗೂ ಸಂಘವು ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ ಎ. ತರಗತಿಯನ್ನು ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದರು.

ಸಂಘದಲ್ಲಿ ಯಶಸ್ವಿನಿ ರೈತರ ವಿಮಾ ಯೋಜನೆ ಜಾರಿಯಲ್ಲಿದ್ದು, ೨೦೨೩-೨೪ನೇ ಸಾಲಿನಲ್ಲಿ ಒಟ್ಟು ೧೦೯೩ ಜನ ಸದಸ್ಯರು ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊAಡಿದ್ದಾರೆ. ರೂ. ೧,೫೭,೫೭೫ ಗಳನ್ನು ವಿಮಾ ಯೋಜನೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು. ೨೦೨೩-೨೪ನೇ ಸಾಲಿನ ೭ನೇ ತರಗತಿ, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರ ಮತ್ತು ಸಂಘದ ವ್ಯಾಪ್ತಿಗೆ ಬರುವ ಸರಕಾರಿ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ಸದಸ್ಯೇತರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ನೀಡಲಾಗುವುದು. ಸಂಘದ ಶತಮಾನೋತ್ಸವ ವಿದ್ಯಾನಿಧಿಯಿಂದ ಸೋಮವಾರಪೇಟೆ ತಾಲೂಕಿನ ವಸತಿ ರಹಿತ ಸರಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಯನ್ನು ಸನ್ಮಾನಿಸಲಾಗುವುದು ಎಂದರು. ಸಂಘದಲ್ಲಿ ಜಾಮೀನು ಸಾಲ, ಕೆಸಿಸಿ ಫಸಲು ಸಾಲ, ಕೃಷಿಯೇತರ ಆಸ್ತಿ ಆಧಾರಿತ ಸಾಲ, ಮಧ್ಯಮಾವಧಿ ಸಾಲ, ಪಶು ಸಂಗೋಪನೆ, ಜಂಟಿ ಭಾದ್ಯತೆ ಸಾಲ, ಸೋಲಾರ್ ಸಿಸ್ಟಂ, ಪಿಗ್ಮಿ ಓವರ್ ಡ್ರಾಫ್ಟ್, ಸ್ವಸಹಾಯ ಗುಂಪು ಸಾಲ, ಆಭರಣ ಈಡಿನ ಸಾಲ, ಗೃಹ ನಿರ್ಮಾಣ, ಪಿಗ್ಮಿ ಠೇವಣಿ, ವಾಹನ ಖರೀದಿ, ಸ್ವರ್ಣ ನಾಣ್ಯ ಯೋಜನೆ ಸೇರಿದಂತೆ ಇನ್ನಿತರ ಸಾಲಗಳನ್ನು ನೀಡಲಾಗುತ್ತಿದ್ದು, ಸಾಲ ಮರುಪಾವತಿ ಶೇ.೯೮.೩೯ರಷ್ಟಿದೆ ಎಂದು ತಿಳಿಸಿದರು.

ಸಹಕಾರ ಸಂಘಗಳು ಉಳಿಯಲು ಸಹಕಾರಿಗಳ ಸೇವೆ ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಸದಸ್ಯರುಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಪಿ.ದಿವಾನ್, ನಿರ್ದೆಶಕರುಗಳಾದ ಜಿ.ಬಿ. ಸೋಮಯ್ಯ, ಬಿ.ಎಂ. ಸುರೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಅವರುಗಳು ಉಪಸ್ಥಿತರಿದ್ದರು.