* ಕಾಫಿ-ಕರಿಮೆಣಸು ಫಸಲಿನ ಮೇಲೆ ದುಷ್ಪರಿಣಾಮ * ಮಳೆಗಾಲದಿಂದ ಮುಕ್ತಗೊಳ್ಳದ ಜಿಲ್ಲೆ
ಮಡಿಕೇರಿ, ಸೆ. ೧೨: ೨೦೨೪ರಲ್ಲಿ ವರ್ಷಾರಂಭದಲ್ಲಿ ಬಹುತೇಕ ಮೇ ತಿಂಗಳ ತನಕವೂ ಜಿಲ್ಲೆಯಲ್ಲಿ ಸುಡು ಬಿಸಿಲಿನಿಂದ ಜನತೆ ಬಸವಳಿದಿದ್ದರು. ಬೇಸಿಗೆಯ ತೀವ್ರ ತಾಪಮಾನದಿಂದಾಗಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿತ್ತು. ಅಲ್ಲದೆ ಕೃಷಿ ಪ್ರಧಾನವಾಗಿರುವ ಹಾಗೂ ಪ್ರಮುಖ ಬೆಳೆಯಾಗಿರುವ ಕಾಫಿಗೆ ಅಗತ್ಯ ಸಮಯದಲ್ಲಿ ಹೂಮಳೆ ಸಿಗದೆ ಕಾಫಿ ಬೆಳೆಯ ಮೇಲೆ ವಾತಾವರಣ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಿತ್ತು. ನದಿ-ಕೆರೆಗಳು ಸೇರಿದಂತೆ ಜಲಮೂಲಗಳು ಈ ಸಂದರ್ಭದಲ್ಲಿ ಬತ್ತಿಹೋದ ಪರಿಣಾಮದಿಂದಾಗಿ ಹಲವು ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದರು. ನದಿಗಳಿಂದ ಹಾಗೂ ಇತರ ಜಲಮೂಲಗಳಿಂದ ತೋಟಗಳಿಗೆ ನೀರು ಹಾಯಿಸುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ೨೦೨೪ರ ಬೇಸಿಗೆ ಅವಧಿಯಲ್ಲಿನ ಪ್ರಮುಖ ಅಂಶವಾಗಿದ್ದು, ಇದು ಜಿಲ್ಲೆಯ ಜನರ ಪಾಲಿಗೆ ಒಂದು ಕಹಿ ನೆನಪಿನಂತಾಗಿದೆ.
ಮೇ ಮಧ್ಯ ಭಾಗದಿಂದ ಜಿಲ್ಲೆಯಲ್ಲಿ ಮಳೆ ಮೊದಲ್ಗೊಂಡು ಜನರು ಒಂದಷ್ಟು ಸಂತುಷ್ಟರಾಗಿದ್ದೂ ಒಂದು ನೆನಪು. ಆದರೆ ಈ ವರ್ಷದ ಮುಂಗಾರು ಮಳೆ ಮಾತ್ರ ಈ ಹಿಂದಿನ ವರ್ಷಗಳಿಗಿಂತ ಭಿನ್ನವಾಗ ಕಂಡುಬAದಿದ್ದು, ಮಳೆ-ಗಾಳಿಯ ಸನ್ನಿವೇಶ ಜಿಲ್ಲೆಯನ್ನು ಕಂಗೆಡಿಸಿದೆ. ಮುಂಗಾರು ವಾಡಿಕೆಯಂತೆ ಜೂನ್ ತಿಂಗಳಿನಿAದ ಪ್ರಾರಂಭವಾಗಿದ್ದು, ಈಗಲೂ ಮುಂದುವರಿಯುತ್ತಿದೆ. ಜಿಲ್ಲೆ ಜೂನ್ನಿಂದ ಈತನಕ ಬಹುತೇಕ ಬಿಸಿಲಿನ ವಾತಾವರಣವನ್ನೇ ಕಾಣದಂತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ೫೦ ಇಂಚುಗಳಿಗೂ ಅಧಿಕ ಮಳೆ ಈ ವೇಳೆಗಾಗಲೇ ಸುರಿದಿದೆ. ಇನ್ನೂ ಸುರಿಯುತ್ತಿದೆ. ಮೃಗಶಿರ ಮಳೆ ನಕ್ಷತ್ರದಿಂದ ಪ್ರಾರಂಭಗೊAಡು ಈತನಕ ಬಂದು ಹೋದ ಎಲ್ಲಾ ಮಳೆ ನಕ್ಷತ್ರಗಳಲ್ಲೂ ಈ ವರ್ಷ ಭಾರೀ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ ೧೧೦ ಇಂಚಿಗೂ ಅಧಿಕ ಮಳೆ ಕೇವಲ ಮೂರು ತಿಂಗಳಲ್ಲಿ ಸುರಿದಿದೆ. ಹಲವು ಗ್ರಾಮೀಣ ಪ್ರದೇಶಗಳಲ್ಲಿ ೧೫೦ ರಿಂದ ೨೦೦ ಇಂಚುಗಳಿಗೂ ಅಧಿಕ ಮಳೆಯಾಗಿರುವುದು ಜಿಲ್ಲೆಯನ್ನು ಜರ್ಜರಿತಗೊಳಿಸಿದೆ.
ಮೃಗಶಿರ, ಆರ್ದ್ರಾ, ಪುನರ್ವಸು, ಪುಷ್ಯ, ಆಶ್ಲೇಷ, ಮಖಾ, ಹುಬ್ಬಾ ಸೇರಿ ಎಲ್ಲಾ ಮಳೆ ನಕ್ಷತ್ರಗಳಲ್ಲೂ ಜಿಲ್ಲೆ ವ್ಯಾಪಕ ಮಳೆಯನ್ನು ಕಂಡಿರುವುದು ಈ ವರ್ಷದ ವಿಶೇಷತೆ ಎಂಬAತಾಗಿದೆ. ತಾ.೧೩ರಿಂದ ಉತ್ತರ ಮಳೆ ನಕ್ಷತ್ರ ಆರಂಭವಾಗುತ್ತಿದ್ದು, ಇದೂ ಸಹ ಬಿರುಸು ತೋರುತ್ತಿದೆಯೋ ಎಂಬ ಆತಂಕ ಜನರಲ್ಲಿದೆ.
ಪ್ರಸಕ್ತ ವರ್ಷದಲ್ಲಿ ಬೇಸಿಗೆ ಅವಧಿಯಲ್ಲಿ ನಿರೀಕ್ಷಿತ ಅಡ್ಡಮಳೆ (ಹೂಮಳೆ) ಸಿಗದಿರುವುದು, ನಂತರದಲ್ಲಿ ಮುಂಗಾರು ಪ್ರಾರಂಭದ ಬಳಿಕದಿಂದ ಈತನಕವೂ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾದ ಕಾಫಿಗೆ ತೀವ್ರ ಹೊಡೆತ ಉಂಟಾಗಿದೆ. ಆರಂಭದಲ್ಲಿ ಸುಡು ಬಿಸಿಲು... ಇದೀಗ ನಿರಂತರ ಮಳೆಯಿಂದ ಕಾಫಿ ಫಸಲು ಮುಂದಿನ ವರ್ಷದಲ್ಲಿ ತೀರಾ ಇಳಿಮುಖವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈಗಾಗಲೇ ದಪ್ಪಗೊಳ್ಳುತ್ತಿರುವ ಕಾಫಿಗೆ ಕೊಳೆರೋಗ, ಉದುರುವಿಕೆ ತೀರಾ ಹೆಚ್ಚಾಗಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ.
ಮತ್ತೊಂದು ಪ್ರಮುಖ ಉಪ ಬೆಳೆಯಾದ ಕರಿಮೆಣಸು ಫಸಲಿನ ಮೇಲೂ ಈ ವರ್ಷದ ವಾತಾವರಣದ ಏರುಪೇರು ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಿದೆ.
ಭತ್ತದ ಕೃಷಿಯ ಮೇಲೂ ಕೆಲವೊಂದು ದುಷ್ಪರಿಣಾಮ ಉಂಟಾಗಿದೆ. ಇದು ಪ್ರಸಕ್ತ ವರ್ಷದ ಬೆಳವಣಿಗೆಯಾಗಿದ್ದು, ಕಾಫಿ ಸೇರಿದಂತೆ ಕೃಷಿ ಅವಲಂಬಿತರು ಮುಂದಿನ ಭವಿಷ್ಯದ ಬಗ್ಗೆ ಚಿಂತಾಕ್ರಾAತರಾಗಿರುವುದು ಈಗಿನ ವಿದ್ಯಾಮಾನದಂತಾಗಿದೆ. -ಶಶಿ