ಸಿದ್ದಾಪುರ, ಸೆ.೧೨: ಬಾಡಗ ಬಾಣಂಗಾಲ ಗ್ರಾಮದ ತೂಪನಕೊಲ್ಲಿಯಲ್ಲಿ ಕರಡಿಗೋಡು ಎಲ್ಕ್ಹಿಲ್ ಎಸ್ಟೇಟ್ ವತಿಯಿಂದ ನೂತನವಾಗಿ ನಿರ್ಮಿಸಲಾದ ಬಸ್ಸ್ ತಂಗುದಾಣ ಮಾಲ್ದಾರೆ ಗ್ರಾ.ಪಂ ಅಧ್ಯಕ್ಷೆ ಮಾಲತಿ ಉದ್ಘಾಟಿಸಿದರು.
ಬಾಡಗ ಬಾಣಂಗಾಲ ಗ್ರಾಮದ ಮಠ ಸೇರಿದಂತೆ ಸಮೀಪದ ಜನರು ತೂಪನಕೊಲ್ಲಿಯಲ್ಲಿ ಬಸ್ಗಾಗಿ ಕಾಯಬೇಕಾಗಿದ್ದು, ಇದನ್ನು ಅರಿತ ಎಲ್ಕ್ಹಿಲ್ ಎಸ್ಟೇಟ್ನಿಂದ ರೂ. ೫ ಲಕ್ಷ ವೆಚ್ಚದಲ್ಲಿ ನೂತನ ಬಸ್ ತಂಗುದಾಣ ನಿರ್ಮಿಸಲಾಗಿದೆ. ಬಸ್ ತಂಗುದಾಣ ಉದ್ಘಾಟಿಸಿ ಮಾತನಾಡಿದ ಮಾಲ್ದಾರೆ ಗ್ರಾ.ಪಂ ಅಧ್ಯಕ್ಷೆ ಮಾಲತಿ ಈ ಭಾಗದ ಜನರು ಮಳೆ ಬಿಸಿಲಿನಲ್ಲಿ ಬಸ್ಗಾಗಿ ಕಾಯುತ್ತಿದ್ದು, ಇದೀಗ ಗುಣಮಟ್ಟದ ಹಾಗೂ ವಿನ್ಯಾಸವಿರುವ ಬಸ್ ತಂಗುದಾಣ ನಿರ್ಮಿಸಲಾಗಿದೆ ಎಂದು ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿ.ಕೆ ಲೊಕೇಶ್, ನಮ್ಮಿಂದ ಸಮಾಜಕ್ಕೆ ಎಂಬ ಕಲ್ಪನೆಯೊಂದಿಗೆ ಇವಾಲ್ವ್ ಬ್ಯಾಕ್ ಸಂಸ್ಥೆ ಹತ್ತಾರು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದೆ. ಕರಡಿಗೋಡು ಸರ್ಕಾರಿ ಶಾಲೆಯನ್ನು ದತ್ತು ತೆಗೆದು ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಸಿದ್ದಾಪುರ, ಮಾಲ್ದಾರೆ ಪಟ್ಟಣದಲ್ಲಿ ಸೋಲಾರ್ ಬೀದಿ ದೀಪ, ಹೈಮಾಸ್ಟ್ ದೀಪ ಸೇರಿದಂತೆ ವಿವಿಧ ಸಾಮಾಜಿಕ ಕೆಲಸವನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಿದ್ದು, ಸಾರ್ವಜನಿಕರು ಇದರ ಸದುಪಯೋಗಪಡೆಯಬೇಕೆಂದರು.
ಈ ಸಂದರ್ಭ ಮಾಲ್ದಾರೆ ಗ್ರಾ.ಪಂ. ಉಪಾಧ್ಯಕ್ಷ ಕುಂಞಣ್ಣ, ಪಿಡಿಓ ಚಂದ್ರಶೇಖರ್, ಸಿದ್ದಾಪುರ ಗ್ರಾ.ಪಂ ಅಧ್ಯಕ್ಷೆ ಪ್ರೇಮಾಗೋಪಾಲ್, ಉಪಾಧ್ಯಕ್ಷ ಪಳನಿಸ್ವಾಮಿ, ಪಿಡಿಓ ಶಫೀಕ್, ಸಂಸ್ಥೆಯ ವ್ಯವಸ್ಥಾಪಕ ಥೋಮಸ್ ಪೌಲ್, ತೋಟದ ವ್ಯವಸ್ಥಾಪಕ ಪವನ್, ಪ್ರವೀಣ್, ಗ್ರಾ.ಪಂ ಸದಸ್ಯರಾದ ಹನೀಫ್, ಹಸನ್, ಶಮೀರ್, ಪ್ರಮುಖರಾದ ಮಹೇಶ್, ಗಿರೀಶ್ ಹಾಜರಿದ್ದರು.