ಮಡಿಕೇರಿ, ಸೆ. ೧೨: ಕೊಡಗು ಜಿಲ್ಲೆಯಲ್ಲಿರುವ ಎರಡು ವಿಶ್ವ ವಿದ್ಯಾಲಯಗಳಾದ ಮಂಗಳೂರು ವಿಶ್ವವಿದ್ಯಾಲಯ ಹಾಗೂ ಕೊಡಗು ವಿಶ್ವವಿದ್ಯಾಲಯಗಳ ನಡುವೆ ಸಿಲುಕಿ ಮಾನಸಿಕವಾಗಿ ವೇದನೆ ಅನುಭವಿ ಸುತ್ತಿರುವವರು ಮಂಗಳೂರು ವಿಶ್ವ ವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು. ಕೊಡಗು ವಿಶ್ವವಿದ್ಯಾಲಯ ಪ್ರಾರಂಭವಾಗುವು ದಕ್ಕಿಂತ ಮೊದಲು ಮಂಗಳೂರು ವಿಶ್ವವಿದ್ಯಾಲಯದಲ್ಲಿ ದಾಖಲಾದ ವಿದ್ಯಾರ್ಥಿಗಳು ಈ ಶೈಕ್ಷಣಿಕ ಸಾಲಿನಲ್ಲಿ ಅಂತಿಮ ವರ್ಷದ ಪದವಿ ಪಡೆದು ಬದುಕಿನಲ್ಲಿ ಸಾಧನೆ ಮಾಡಿ ಗುರಿ ಸೇರಬೇಕೆಂಬ ಉತ್ಸಾಹದಿಂದ ಅಂತಿಮ ವರ್ಷದ ಶುಲ್ಕವನ್ನು ಪಾವತಿಸಿರುವ ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಉಪನ್ಯಾಸಕರಿಲ್ಲದೆ ತರಗತಿಗಳು ಸರಿಯಾಗಿ ನಡೆಯದೆ ಇರುವುದರಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಕೆಲವು ದಿನಗಳು ಅತಿಥಿ ಉಪನ್ಯಾಸಕರ ವೇತನದ ಸಮಸ್ಯೆ, ಹಾಗೂ ಉಪನ್ಯಾಸಕರ ಪ್ರತಿಭಟನೆಯಿಂದ ತರಗತಿಗಳು ನಡೆದಿರಲಿಲ್ಲ. ವೇತನ ಪಾವತಿಯಾದ ನಂತರ ತರಗತಿಗಳು ನಡೆದಿದ್ದವು.

ಅಂತಿಮ ವರ್ಷದ ವಿದ್ಯಾರ್ಥಿ ಗಳಿಗೆ ಹಲವಾರು ಪಾಠ ವಿಷಯಗಳಿದ್ದು ಕೇವಲ ಬೆರಳೆಣಿಕೆಯ ಉಪನ್ಯಾಸಕರು ತರಗತಿಗಳಿಗೆ ಭೋದಿಸುತ್ತಿದ್ದಾರೆ. ಕಾಲೇಜಿಗೆ ಹೋಗದೆ ಪಾಠ ಕಲಿಯದೆ ಪರೀಕ್ಷೆ ಬರೆಯುವುದಾದರೂ ಹೇಗೆ? ಒಂದೊಮ್ಮೆ ಗೂಗಲ್ , ಯೂಟ್ಯೂಬ್ ಗಳಿಂದ ಕಲಿತರೂ (ಆಸಕ್ತಿ ಇರುವ ವಿದ್ಯಾರ್ಥಿಗಳು ಮಾತ್ರ) ತಕ್ಕ ಮಟ್ಟಿಗೆ ಅರ್ಥಮಾಡಿಕೊಳ್ಳಬಹುದು. ಆದರೆ ವಿಜ್ಞಾನ, ಕಂಪ್ಯೂಟರ್ ಶಿಕ್ಷಣ ದ ವಿಷಯಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಪಾಠ ಕಲಿಯದೆ ಹೇಗೆ ಕಲಿಯಲು ಸಾಧ್ಯ? .ಅಂತಿಮ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅಸಹಾಯಕರಾಗಿ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಏನನ್ನೂ ಕಲಿಯದೆ ಎದುರಿಸುವ ಪರೀಕ್ಷೆಯ ಫಲಿತಾಂಶ ಶೂನ್ಯ.

ಇಲ್ಲಿ ಯಾರು ಹೊಣೆಗಾರರು?

೧) ನಮ್ಮ ಜಿಲ್ಲೆಯ ಪ್ರತಿಷ್ಠಿತ ಕಾಲೇಜಿಗೆ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಭಿಮಾನ ಗೌರವದಿಂದ ಸೇರಿಸಿದ ಪೋಷಕರೆ?.

೨.) ದೂರದೂರಿನಲ್ಲಿ ಶಿಕ್ಷಣ ಪಡೆಯಬೇಕೆಂಬ ಆಸೆಯಿದ್ದರೂ ತಮ್ಮ ಪೋಷಕರ ಆರ್ಥಿಕ ಸ್ಥಿತಿಗತಿಯ ಅರಿವಿದ್ದು, ತಮ್ಮೆಲ್ಲ ಆಸೆಗಳನ್ನೂ ಚಿವುಟಿ ಪೋಷಕರ ಇಚ್ಚೆಯಂತೆ ಅವರು ಸೇರಿಸಿದ ಕಾಲೇಜಿಗೆ ಹೋಗಿ ಸರಿಯಾದ ಭೋದನೆಯಿಲ್ಲದೆ ಕನಿಷ್ಟ ಅಂಕದೊAದಿಗೆ ಉತ್ತೀರ್ಣ / ಅನುತ್ತೀರ್ಣ ಫಲಿತಾಂಶ ಪಡೆದು ಪೋಷಕರ ನಿರೀಕ್ಷೆಯನ್ನು ಹುಸಿ ಮಾಡುವ ಅಸಹಾಯಕ ವಿದ್ಯಾರ್ಥಿಗಳೆ?

೩) ಶೈಕ್ಷಣಿಕ ವರ್ಷವು ಪ್ರಾರಂಭ ಗೊಂಡು ವಿದ್ಯಾರ್ಥಿಗಳಿಂದ ಶುಲ್ಕ ಪಾವತಿಯಾದ ನಂತರವೂ ಭೋಧಕರ, ಬೋಧನೆಯ ಬಗ್ಗೆ ಕ್ರಿಯಾ ಚಟುವಟಿಕೆಯ ಯೋಜನೆಯನ್ನು ರಚಿಸದ, ಭೋದಕರನ್ನು ನೇಮಿಸದ ಮಂಗಳೂರು ವಿಶ್ವವಿದ್ಯಾಲಯದ ಮುಖ್ಯಸ್ಥರೆ?.

ಇಬ್ಬರ ಜಗಳದಲ್ಲಿ ಕೂಸು ಬಡವಾಯಿತೆಂಬAತೆ ಕೊಡಗು ಮತ್ತು ಮಂಗಳೂರು ವಿಶ್ವವಿದ್ಯಾಲಯಗಳ ಶೀತಲ ಸಮರದಲ್ಲಿ ನಲುಗಿರುವುದು ಮಂಗಳೂರು ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು.

ಜಿಲ್ಲೆಯ ಜನಪ್ರತಿನಿಧಿಗಳು, ಸಿರಿವಂತರು, ಗಣ್ಯವ್ಯಕ್ತಿಗಳಿಗೆ ಈ ಸಮಸ್ಯೆಯ ಅರಿವು ಇರಲಾರದು. ಏಕೆಂದರೆ ಅವರ ಮಕ್ಕಳು ಪರವೂರಿನ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಶುಲ್ಕ ಪಾವತಿಗೂ ಮುಂಚೆ ಉಪನ್ಯಾಸಕರ ಕೊರತೆಯ ಬಗೆ ತಿಳಿಸಿದ್ದರೆ ಬೇರೆ ಕಾಲೇಜಿನಲ್ಲಿ ದಾಖಲಾಗಬಹುದಿತ್ತು.

ಆದಷ್ಟು ಶೀಘ್ರ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳು ಸಮಸ್ಯೆಗೆ ಸ್ಪಂದಿಸುವ ಮೂಲಕ ಪರಿಹಾರವನ್ನು ನೀಡಬೇಕು.

- ಜಯಂತಿ. ರೈ, ಉಪಾಧ್ಯಕ್ಷರು

ಪೋಷಕರು ಮತ್ತು ಶಿಕ್ಷಕರ ಸಂಘ

ಫೀ. ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು.