ಮಡಿಕೇರಿ, ಸೆ. ೧೨: ೨೦೧೧ರಿಂದ ೧೦ ಮಂದಿ ಪುರುಷರ ವಿರುದ್ಧ ಕೊಲೆಯತ್ನ, ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಪ್ರಕರಣಗಳನ್ನು ದಾಖಲಿಸುತ್ತ ಬರುತ್ತಿರುವ ಮುಳ್ಳುಸೋಗೆಯ ಗೋಪಾಲ ಸರ್ಕಲ್ ಬಳಿಯ ನಿವಾಸಿ ದೀಪಿಕಾ(೩೩) ಎಂಬಾಕೆಯು ಮತ್ತೆ ರಾಜ್ಯದ ಯಾವುದಾದರು ಪೊಲೀಸ್ ಠಾಣೆಯಲ್ಲಿ ಇತರ ಪುರುಷರ ವಿರುದ್ಧ ದೂರು ನೀಡಲು ಬಂದಲ್ಲಿ ದೂರು ಸ್ವೀಕರಿಸುವ ಠಾಣೆಯ ಸಿಬ್ಬಂದಿ ಎಚ್ಚರ ವಹಿಸುವಂತೆ ಸೂಚಿಸಲು ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ಪೊಲೀಸ್ ಮಹಾನಿರೀಕ್ಷಕರಿಗೆ ರಾಜ್ಯ ಉಚ್ಛ ನ್ಯಾಯಾಲಯವು ನಿರ್ದೇಶನ ನೀಡಿದೆ. ಈಕೆ ಮುಂದೆ ನೀಡಬಹುದಾದ ದೂರನ್ನು ಸ್ವೀಕರಿಸುವಾಗ ಸಂಬAಧಿಸಿದ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಾಥಮಿಕ ತನಿಖೆ, ವಿಚಾರಣೆ ನಡೆಸದೆ ದೂರನ್ನು ಸ್ವೀಕರಿಸದಂತೆಯೂ ಹೈ ಕೋರ್ಟ್ ನಿರ್ದೇಶಿಸಿದೆ.

ಸಕಲೇಶಪುರದ ವಿವೇಕ ಎಂಬವರು, ತಮ್ಮ ಹಾಗೂ ತಮ್ಮ ಕುಟುಂಬದವರ ವಿರುದ್ಧ ದೀಪಿಕಾ ಹೂಡಿರುವ ಕ್ರಿಮಿನಲ್ ಪ್ರಕರಣದ ರದ್ದತಿ ಕೋರಿ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಮಹಿಳೆಯು ೧೦ ಪುರುಷರ ವಿರುದ್ಧ ೨೦೧೧ ರಿಂದ ಐ.ಪಿ.ಸಿಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಲೈಂಗಿಕ ಕಿರುಕುಳ, ಅತ್ಯಾಚಾರ, ಹಲ್ಲೆ ಇತ್ಯಾದಿ ಪ್ರಕರಣಗಳನ್ನು ವೃತಾರೋಪಿಸಿ ದಾಖಲಿಸಿದ್ದಾಳೆ. ಕ್ಷÄಲ್ಲಕವಾಗಿ ಪ್ರಕರಣಗಳನ್ನು ದಾಖಲಿಸುವುದನ್ನು ತಪ್ಪಿಸಲು ಹಾಗೂ ೧೧ನೆ ಪ್ರಕರಣ ದಾಖಲಿಸುವುದನ್ನು ತಡೆಯಲು, ಪ್ರಾಥಮಿಕ ತನಿಖೆ ನಡೆಸದೆ ರಾಜ್ಯದ ಯಾವುದೇ ಪೊಲೀಸ್ ಠಾಣೆ ಈಕೆಯ ದೂರು ಸ್ವೀಕರಿಸದಂತೆ ಸೂಚನೆ ನೀಡಲು ಡಿ.ಜಿ.ಪಿ ಹಾಗೂ ಐ.ಜಿ.ಪಿ ಅವರುಗಳಿಗೆ ನಿರ್ದೇಶಿಸಿದೆ. ಹಾಗೂ ವಿವೇಕ ಅವರ ‘ಕ್ರಿಮಿನಲ್ ಪ್ರಕರಣ ರದ್ದತಿ’ ಅರ್ಜಿ ವಿಚಾರಣೆ ಸಂದರ್ಭ ಪ್ರತಿವಾದಿಯಾಗಿ ದೀಪಿಕಾ ಹಾಜರಾಗದೆ ಇದ್ದುದರಿಂದ ವಿವೇಕ ಅವರ ಮೇಲೆ ದೀಪಿಕಾಳು ೨೦೨೨ರಲ್ಲಿ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣವನ್ನು ನ್ಯಾಯಾಲಯವು ರದ್ದು ಪಡಿಸಿದೆ.

೨೦೧೧ರಿಂದ ೧೦ ಪ್ರಕರಣಗಳು ದಾಖಲು

೨೦೧೧ರ ಜುಲೈ ೧೬ ರಂದು ವರದಕ್ಷಿಣೆ ಕಿರುಕುಳ ಆರೋಪದಡಿ ದೀಪಿಕಾಳು ಬೆಂಗಳೂರಿನಲ್ಲಿ ಪುರುಷನೊಬ್ಬನ ವಿರುದ್ಧ ಪ್ರಕರಣ ದಾಖಲಿಸಿದ್ದಳು. ೨೦೧೦ರ ಸೆಪ್ಟೆಂಬರ್ ೨೫ ರಂದು ಪೀಣ್ಯ ಸಬ್‌ರಿಜಿಸ್ಟçರ್ ಕಚೇರಿಯಲ್ಲಿ ಈ ಪುರುಷನೊಂದಿಗೆ ಮದುವೆಯಾಗಿದ್ದಾಗಿ ಆಕೆ ದೂರಿನಲ್ಲಿ ಉಲ್ಲೇಖಿಸಿದ್ದಳು. ಐ.ಪಿ.ಸಿ ಸೆಕ್ಷನ್ ೪೯೮ ಎ ಹಾಗೂ ಡೌರಿ ತಡೆಯ ಸೆಕ್ಷನ್ ೩, ೪ ರಲ್ಲಿ ಪ್ರಕರಣ ದಾಖಲಾಗಿತ್ತು. ೨೦೧೫ರ ಏಪ್ರಿಲ್ ೨೨ ರಂದು ಬೆಂಗಳೂರು ನಿವಾಸಿ ಸಂತೋಷ್ ಎಂಬವರ ವಿರುದ್ಧ ಮಹಿಳೆ ದೀಪಿಕಾ ಸೆಕ್ಷನ್ ೩೭೬, ೪೨೦, ೫೦೪, ೫೦೬ ರಡಿ ಪ್ರಕರಣ ದಾಖಲಿಸಿದ್ದಳು. ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ ಬಳಿಕ ಮದುವೆಗೆ ನಿರಾಕರಿಸಿದ್ದಾನೆ ಎಂದು ಆರೋಪಿಸಿ ಸಂತೋಷ್ ವಿರುದ್ಧ ದೂರು ನೀಡಿದ್ದಳು.

(ಮೊದಲ ಪುಟದಿಂದ) ೨೦೧೫ರ ಜೂನ್ ೧೪ ರಂದು ಬೆಂಗಳೂರು ನಿವಾಸಿ ಹನುಮೇಶ ವಿರುದ್ಧ ಸೆಕ್ಷನ್ ೫೦೪, ೫೦೬ ಅಡಿ ಪ್ರಕರಣ ದಾಖಲಾಗಿತ್ತು. ಜೀವ ಬೆದರಿಕೆ ನೀಡಿದ್ದಾಗಿ ಇವರ ವಿರುದ್ಧ ದೀಪಿಕಾ ದೂರು ನೀಡಿದ್ದಳು.

೨೦೧೭ರ ಏಪ್ರಿಲ್ ೨೬ ರಂದು ಬೆಂಗಳೂರು ನಿವಾಸಿ ಕುಮಾರ್ ಗೌರವ್ ಎಂಬವರ ವಿರುದ್ಧ ದೈಹಿಕ ಸಂಪರ್ಕ ನಡೆಸಿದ ಬಳಿಕ ಮದುವೆಗೆ ನಿರಾಕರಣೆ ಹಾಗೂ ಹಲ್ಲೆ ಮಾಡಿದ್ದಾಗಿ ದೂರು ನೀಡಿದ್ದಳು.

೨೦೧೯ರ ಜೂನ್ ೨೬ ರಂದು ಮುಂಬೈ ನಿವಾಸಿ ಮನೋಜ್ ಬಾಲಾಸಾಹೆಬ್ ಧನವಾಡೆ ವಿರುದ್ಧ ಸೆಕ್ಷನ್ ೩೭೬ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಲವಂತವಾಗಿ ದೈಹಿಕ ಸಂಪರ್ಕ ಮಾಡಿ ಮದುವೆ ಆಗುವ ಭರವಸೆ ನೀಡಿ, ಮದುವೆ ಆಗದಿರುವ ಬಗ್ಗೆ ದೀಪಿಕಾ ದೂರು ನೀಡಿದ್ದಳು.

೨೦೨೦ರ ಫೆಬ್ರವರಿ ೫ ರಂದು ಚಿಕ್ಕಬಳ್ಳಾಪುರ ನಿವಾಸಿ ಮಹಮದ್ ನಾಜಿಮ್ ವಿರುದ್ಧ ಸೆಕ್ಷನ್ ೩೭೬ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿಯೂ ಕೂಡ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿ ಮದುವೆ ಆಗುವ ಭರವಸೆ ನೀಡಿ ಮದುವೆ ಆಗದಿರುವ ಬಗ್ಗೆ ದೀಪಿಕಾ ದೂರು ನೀಡಿದ್ದಳು.

೨೦೨೦ರ ಫೆಬ್ರವರಿ ೨೯ ರಂದು ಬೆಂಗಳೂರಿನ ತೇಜಸ್ ಎಂಬವರ ವಿರುದ್ಧ ಐ.ಪಿ.ಸಿ ಸೆಕ್ಷನ್ ೫೦೬, ೫೦೪ ಹಾಗೂ ೩೫೪ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ತೇಜಸ್ ವಿರುದ್ಧ ಪ್ರಕರಣ ದಾಖಲಾಗಿತ್ತು.

೨೦೨೦ರ ನವೆಂಬರ್ ೮ ರಂದು ವಿಶ್ವನಾಥ್ ಬಿರಾದರ್ ಎಂಬವರ ವಿರುದ್ಧ ಹಲ್ಲೆ ಹಾಗೂ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಸೆಕ್ಷನ್ ೩೨೩ ಹಾಗೂ ೩೭೬ ಅಡಿ ಪ್ರಕರಣ ದಾಖಲಾಗಿದೆ.

೨೦೨೧ರ ಸೆಪ್ಟೆಂಬರ್ ೧೬ ರಂದು ಬೆಂಗಳೂರು ನಿವಾಸಿ ಅಭಿಷೇಕ್ ಅಡಿಗಾ ಎಂಬವರ ವಿರುದ್ಧ ಸೆಕ್ಷನ್ ೩೫೪ಎ, ೪೧೭, ೫೦೪ ಹಾಗೂ ೫೦೬ ಅಡಿ ಪ್ರಕರಣ ದಾಖಲಾಗಿದೆ. ಲೈಂಗಿಕ ಕಿರುಕುಳ, ಅವಾಚ್ಯ ಶಬ್ಧಗಳಿಂದ ನಿಂದನೆ, ಮದುವೆಯಾಗುವುದಾಗಿ ಒಪ್ಪಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ದೀಪಿಕಾ ದೂರು ನೀಡಿದ್ದಳು.

ಕೊನೆಯದಾಗಿ ೨೦೨೨ರಲ್ಲಿ ಸಕಲೇಶಪುರ ನಿವಾಸಿ ವಿವೇಕ ಅವರ ವಿರುದ್ಧ ದೈಹಿಕ ಹಿಂಸೆ, ಅತ್ಯಾಚಾರ ಆರೋಪದಡಿ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ವಿವೇಕ ಅವರೊಂದಿಗೆ ರೆಜಿಸ್ಟರ್ ಮದುವೆಯಾಗಿದ್ದು, ನಂತರದಲ್ಲಿ ಲೈಂಗಿಕವಾಗಿ ಕಿರುಕುಳ ನೀಡಿದ್ದಲ್ಲದೆ ಹಣದ ಬೇಡಿಕೆ ಇಟ್ಟಿದ್ದಾಗಿಯೂ ದೂರು ದಾಖಲಿಸಿದ್ದಳು. ದೀಪಿಕಾ ನೀಡಿರುವ ಬಹುತೇಕ ದೂರುಗಳಲ್ಲಿ ಪುರಷರ ಕುಟುಂಬದ ಸದಸ್ಯರ ಮೇಲೂ ಹಲ್ಲೆ ಇತ್ಯಾದಿ ಆರೋಪ ಹೊರಿಸಲಾಗಿದೆ.

ಇದರಲ್ಲಿ ಕೆಲ ಪ್ರಕರಣಗಳ ರದ್ದತಿಗೆ ಪ್ರಕರಣದಲ್ಲಿ ಆರೋಪಿತ ಪುರುಷರು ಹೈ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಹಲವಾರು ಬಾರಿ ವಿಚಾರಣೆಗೆ ಹಾಜರಾಗಬೇಕೆಂಬ ನೋಟಿಸ್ ದೀಪಿಕಾಳಿಗೆ ದೊರೆತಿದ್ದರೂ ಆಕೆ ಹಾಜರಾಗದ ಹಿನ್ನೆಲೆ ಪ್ರಕರಣಗಳನ್ನು ರದ್ದು ಪಡಿಸಲಾಗಿವೆ. ವಿವೇಕ ಅವರ ಪ್ರಕರಣದಲ್ಲೂ ಇದೇ ರೀತಿ ಆಗಿದ್ದು, ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ದೀಪಿಕಾಳು ವೃತಾರೋಪ ಮಾಡಿದ್ದು, ಆರೋಪಿಗಳ ವಿರುದ್ಧ ಕ್ರಮ ಜರುಗಿಸಲು ಯಾವುದೇ ಸಾಕ್ಷಾö್ಯಧಾರಗಳು ಇಲ್ಲದಿರುವುದನ್ನೂ ಗಮನಿಸಿರುವ ನ್ಯಾಯಾಲಯವು, ಆಕೆ ಮತ್ತೆ ಯಾರಾದರೂ ಪುರುಷರ ವಿರುದ್ಧ ದೂರು ನೀಡಿದರೆ, ಪ್ರಾಥಮಿಕ ವಿಚಾರಣೆ ನಡೆಸಿಯೇ ಸ್ವೀಕರಿಸುವಂತೆ ಡಿ.ಜಿ.ಪಿಗೆ ನಿರ್ದೇಶಿಸಿದೆ.