ಮಡಿಕೇರಿ, ಸೆ. ೧೧: ಸಂತೆ ದಿನಗಳಂದು ಆಯಾ ಕೇಂದ್ರ ಸ್ಥಾನದಲ್ಲಿ ಸಂಬAಧಪಟ್ಟ ಅಧಿಕಾರಿಗಳು ಇರಬೇಕು. ಈ ನಿಟ್ಟಿನಲ್ಲಿ ಉನ್ನತ ಅಧಿಕಾರಿಗಳು ತ್ವರಿತವಾಗಿ ಕ್ರಮವಹಿಸಬೇಕೆಂದು ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಜಿಲ್ಲಾಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ, ಹೋಬಳಿ, ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳ ಸಂತೆ ದಿನದಂದು ಅಧಿಕಾರಿಗಳು ಸಿಗುತ್ತಾರೆ ಎಂದು ಭಾವಿಸಿ ವಿವಿಧೆಡೆಗಳಿಂದ ಆಡಳಿತಾತ್ಮಕ ಕೆಲಸಕ್ಕೆ ಸರಕಾರಿ ಕಚೇರಿಗಳಿಗೆ ಜನರು ಬರುತ್ತಾರೆ. ಆದರೆ, ಹಿರಿಯ ಅಧಿಕಾರಿಗಳೊಂದಿಗೆ ಸಭೆ, ಆಡಳಿತ ಕೆಲಸ, ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬ ಕಾರಣ ಹೇಳಿ ಕಚೇರಿಯಲ್ಲಿ ಅಧಿಕಾರಿಗಳು ಲಭ್ಯವಾಗುತ್ತಿಲ್ಲ. ಇದರಿಂದ ದೂರದ ಊರುಗಳಿಂದ ಬರುವ ಜನರಿಗೆ ಹಣ, ಸಮಯ ನಷ್ಟವಾಗುವುದರೊಂದಿಗೆ ತಮ್ಮ ಕೆಲಸಗಳು ವಿಳಂಬವಾಗುತ್ತಿವೆ. ತುರ್ತು ಕಾರ್ಯ, ಅನಿವಾರ್ಯ ಪರಿಸ್ಥಿತಿ ಇದ್ದಲ್ಲಿ ಮಾತ್ರ ಅಧಿಕಾರಿಗಳು ಕಚೇರಿಯಿಂದ ತೆರಳಬೇಕು. ಇಲ್ಲಸಲ್ಲದ ಕಾರಣ ಹೇಳಿ ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಸಬಾರದು ಎಂದು ಹೇಳಿದರು.
ಇತ್ತೀಚೆಗೆ ಸಮಸ್ಯೆಯ ಕುರಿತು ಚರ್ಚೆ ನಡೆಸಲು ವೀರಾಜಪೇಟೆ ತಹಶೀಲ್ದಾರ್ ಭೇಟಿಗೆ ಸಮಯ ನಿಗದಿಪಡಿಸಲಾಗಿತ್ತು. ತೆರಳಿದ ಸಂದರ್ಭ ಅವರಿರಲಿಲ್ಲ. ಇದರಿಂದ ಕಾಯುವ ಪರಿಸ್ಥಿತಿ ಸೃಷ್ಟಿಯಾಗಿ ಕೊನೆಗೆ ಅವರು ಬರಲಿಲ್ಲ. ಈ ಬಗ್ಗೆ ತಹಶೀಲ್ದಾರ್ ಮೊದಲೇ ಮಾಹಿತಿ ನೀಡಬೇಕಾಗಿತ್ತು ಎಂದು ದೂರಿದರು.
ಬೆಳೆಗಾರರಿಗೆ ವಂಚನೆ ಆರೋಪ
ಸಮಿತಿ ಸಲಹೆಗಾರ ಚೊಟ್ಟೆಯಂಡಮಾಡ ಎನ್. ಬೋಸ್ ವಿಶ್ವನಾಥ್ ಮಾತನಾಡಿ, ಕಾಫಿ ಬೆಳೆಗೆ ಅಂತರರಾಷ್ಟಿçÃಯ ಮಾರುಕಟ್ಟೆಯಲ್ಲಿರುವ ದರವನ್ನು ಬೆಳೆಗಾರರಿಗೆ ನೀಡದೆ ಕಾಫಿ ವ್ಯಾಪಾರಸ್ಥರು ವಂಚನೆ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಇ.ಪಿ. ದರ ರೂ. ೪೦೦ ರಿಂದ ೪೫೦ ಕ್ಕಿಂತ ಹೆಚ್ಚಿದ್ದರೂ ಸ್ಥಳೀಯ ವ್ಯಾಪಾರಿಗಳು ರೂ. ೪೦೦ ಗರಿಷ್ಠ ಬೆಲೆಯಲ್ಲಿಯೇ ಖರೀದಿಸುತ್ತಿದ್ದಾರೆ. ಇ.ಪಿ. ದರ ರೂ. ೪೦೦ಕ್ಕಿಂತ ಹೆಚ್ಚಿದ್ದ ಸಂದರ್ಭ ಖರೀದಿಸುವವರು ಇಲ್ಲವೆಂದು ಕಾರಣವೊಡ್ಡಿ ಕಡಿಮೆ ದರಕ್ಕೆ ಖರೀದಿಸುವ ಕೆಲಸ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರ ಒಕ್ಕೂಟ ಸೇರಿದಂತೆ ಬೆಳೆಗಾರರ ಹಿತ ಕಾಯುವ ಸಂಘಟನೆಗಳು ಸರಕಾರ, ಸಂಬAಧಪಟ್ಟವರ ಗಮನ ಸೆಳೆಯಬೇಕು. ಕಾಫಿ ಮಾರಾಟ ಸಂದರ್ಭ ತೂಕದಲ್ಲಿ ವ್ಯಾಪಾರಿಗಳು ಮೋಸ ಮಾಡುತ್ತಿದ್ದಾರೆ. ಅಂತರರಾಷ್ಟಿçÃಯ ಮಾರುಕಟ್ಟೆ ದರ ಬೆಳೆಗಾರರ ಕೈ ಸೇರುವ ನಿಟ್ಟಿನ ಕೆಲಸ ನಡೆಯಬೇಕೆಂದು ಒತ್ತಾಯಿಸಿದರು.
ಕಾರ್ಮಿಕರ ಕೊರತೆ, ಹವಾಮಾನ ವೈಪರೀತ್ಯ ಬೆಳೆಗಾರರಿಗೆ ಸಂಕಷ್ಟ ಮೂಡಿಸಿದೆ. ಅಧಿಕಾರಿಗಳು ಬೆಳೆ ನಷ್ಟ ಸಂಬAಧ ಕೈಗೊಂಡ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ. ಸೂಕ್ತ ಪರಿಹಾರವೂ ಲಭ್ಯವಾಗಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ಉಪಾಧ್ಯಕ್ಷ ಸಣ್ಣುವಂಡ ರತ್ನ ಸುಬ್ಬಯ್ಯ, ಸಹ ಕಾರ್ಯದರ್ಶಿ ಕೋಳೆರ ರಾಜ ನರೇಂದ್ರ ಹಾಜರಿದ್ದರು.