ಸೋಮವಾರಪೇಟೆ, ಸೆ. ೧೧: ಬಿಜೆಪಿ ಪಕ್ಷವು ಸ್ಪಷ್ಟ ಬಹುಮತ ಹೊಂದಿರುವ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಅಧಿಕಾರ ಎನ್‌ಡಿಎ ಮೈತ್ರಿಕೂಟದ ಪಾಲಾಗಿದ್ದು, ಎರಡನೇ ಅವಧಿಯ ಅಧ್ಯಕ್ಷೆಯಾಗಿ ಜೆಡಿಎಸ್‌ನ ಜಯಂತಿ ಶಿವಕುಮಾರ್ ಹಾಗೂ ಉಪಾಧ್ಯಕ್ಷೆಯಾಗಿ ಬಿಜೆಪಿಯ ಮೋಹಿನಿ ಹೇಮಂತ್ ಅವರುಗಳು ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿಯೂ ಆಗಿರುವ ತಾಲೂಕು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಅವರ ಉಪಸ್ಥಿತಿ ಯಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಂದೊAದು ನಾಮಪತ್ರ ಮಾತ್ರ ಸಲ್ಲಿಕೆ ಯಾದವು. ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಿದ್ದು, ಜಯಂತಿ ಶಿವಕುಮಾರ್, ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿದ್ದು ಮೋಹಿನಿ ಹೇಮಂತ್ ಮಾತ್ರ ನಾಮಪತ್ರ ಸಲ್ಲಿಸಿದರು.

(ಮೊದಲ ಪುಟದಿಂದ) ನಿಗದಿತ ಸಮಯದಲ್ಲಿ ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆ ಈರ್ವರ ಆಯ್ಕೆಯನ್ನು ಚುನಾವಣಾಧಿಕಾರಿಗಳು ಅಧಿಕೃತವಾಗಿ ಪ್ರಕಟಿಸಿದರು.

ರೆಸಾರ್ಟ್ನಿಂದ ಕಚೇರಿಗೆ: ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಉತ್ಸಾಹ ತೋರದಿದ್ದರೂ ಅಂತಿಮ ಕ್ಷಣದವರೆಗೂ ಎನ್‌ಡಿಎ ಮುಖಂಡರು ತಮ್ಮ ಸದಸ್ಯರುಗಳನ್ನು ಹಿಡಿದಿಟ್ಟುಕೊಂಡಿದ್ದರು. ಬಿಜೆಪಿಯ ಮೃತ್ಯುಂಜಯ, ಜೆಡಿಎಸ್‌ನಿಂದ ಗೆದ್ದು ಬಿಜೆಪಿ ಸೇರಿರುವ ಜೀವನ್ ಅವರುಗಳನ್ನು ಹೊರತುಪಡಿಸಿ, ಉಳಿದ ಸದಸ್ಯರುಗಳನ್ನು ನಿನ್ನೆಯೇ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಸದಸ್ಯರು, ಮಾಜಿ ಶಾಸಕ ಅಪ್ಪಚ್ಚುರಂಜನ್ ನೇತೃತ್ವದಲ್ಲಿ ಖಾಸಗಿ ರೆಸಾರ್ಟ್ಗೆ ಕರೆದೊಯ್ದಿದ್ದರು.

ಇಂದು ಬೆಳಿಗ್ಗೆ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲು ಕೆಲವೇ ನಿಮಿಷಗಳು ಇರುವಾಗ ಪಂಚಾಯಿತಿ ಕಚೇರಿಗೆ ಆಗಮಿಸಿದ ಸದಸ್ಯರುಗಳು ಚುನವಣಾ ಪ್ರಕ್ರಿಯೆಯಲ್ಲಿ ಭಾಗಿಯಾದರು. ನಾಮಪತ್ರ ಸಲ್ಲಿಕೆಯ ಅಂತಿಮ ಕ್ಷಣದವರೆಗೂ ಚುನಾವಣೆಯನ್ನು ಅವಲೋಕಿಸುತ್ತಿದ್ದ ಸಂಸದ ಯದುವೀರ್ ಅವರೂ ಸಹ ಸೋಮವಾರಪೇಟೆಗೆ ಆಗಮಿಸಿದ್ದರು. ಒಂದು ವೇಳೆ ಹೆಚ್ಚುವರಿ ನಾಮಪತ್ರ ಸಲ್ಲಿಕೆಯಾಗಿ ಚುನಾವಣೆ ನಡೆಸಬೇಕಾದ ಸಂದರ್ಭ ಎದುರಾದರೆ ತಾವೂ ಸಹ ಮತದಾನ ಮಾಡಲು ಸಿದ್ಧರಾಗಿದ್ದರು. ಆದರೆ ಅವಿರೋಧ ಆಯ್ಕೆಯಾದ್ದರಿಂದ ಯಾವುದೇ ಗೊಂದಲ ಉಂಟಾಗಲಿಲ್ಲ.

೧೧ ಸದಸ್ಯ ಬಲದ ಪಟ್ಟಣ ಪಂಚಾಯಿತಿಗೆ ಕಳೆದ ೨೮.೧೦.೨೦೧೮ರಂದು ಚುನಾವಣೆ ನಡೆದಿತ್ತು. ಈ ಸಂದರ್ಭ ಬಿಜೆಪಿಯಿಂದ ೩, ಕಾಂಗ್ರೆಸ್‌ನಿAದ ೪, ಜೆಡಿಎಸ್‌ನಿಂದ ೩ ಹಾಗೂ ಓರ್ವ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಪಕ್ಷೇತರ ಸದಸ್ಯರಾಗಿದ್ದ ಶುಭಕರ್ ಅವರು ಬಿಜೆಪಿಗೆ ಬೆಂಬಲ ನೀಡಿದ್ದರು. ನಂತರ ಎರಡು ಸ್ಥಾನಕ್ಕೆ ಮರುಚುನಾವಣೆ ನಡೆದು, ಹೆಚ್ಚುವರಿಯಾಗಿ ಬಿಜೆಪಿ ಒಂದು ಸ್ಥಾನ ಪಡೆಯಿತು.

ಈ ಹಿನ್ನೆಲೆ ಬಿಜೆಪಿಯ ಸಂಖ್ಯೆ ೫ಕ್ಕೆ ಏರಿಕೆಯಾಗಿತ್ತು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್‌ನ ನಾಗರತ್ನ ಹಾಗೂ ಜೀವನ್ ಅವರುಗಳು ಅಧಿಕೃತವಾಗಿ ಬಿಜೆಪಿ ಸೇರಿದ್ದು, ಮೈತ್ರಿ ಧರ್ಮದಿಂದಾಗಿ ಜೆಡಿಎಸ್‌ನಲ್ಲಿರುವ ಜಯಂತಿ ಅವರ ಮತವೂ ಸೇರಿದಂತೆ ಎನ್‌ಡಿಎ ೮ ಸದಸ್ಯ ಬಲ ಹೊಂದಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿAದ ಶೀಲಾ ಡಿಸೋಜ ಸ್ಪರ್ಧಿಸಲು ಅರ್ಹರಾಗಿದ್ದರೂ ಸಹ, ಮೂವರು ಸದಸ್ಯರು ಮಾತ್ರ ಇದ್ದ ಕಾರಣ ಚುನಾವಣಾ ಪ್ರಕ್ರಿಯೆಯಿಂದ ಹಿಂದೆ ಉಳಿದರು.

ಎನ್‌ಡಿಎ ಮೈತ್ರಿಕೂಟ ಅಧಿಕಾರ ಹಿಡಿಯುತ್ತಿದ್ದಂತೆ ಬಿಜೆಪಿ ಹಾಗೂ ಜೆಡಿಎಸ್‌ನ ಮುಖಂಡರು, ಕಾರ್ಯಕರ್ತರು ಪಟ್ಟಣ ಪಂಚಾಯಿತಿ ಮುಂಭಾಗ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಂಸದ ಯದುವೀರ್, ಮಾಜಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಎಸ್.ಜಿ. ಮೇದಪ್ಪ, ಪ.ಪಂ. ಸದಸ್ಯರುಗಳಾದ ಪಿ.ಕೆ. ಚಂದ್ರು, ಬಿ.ಆರ್. ಮಹೇಶ್, ಬಿ.ಆರ್. ಮೃತ್ಯುಂಜಯ, ಶುಭಕರ್, ಜೀವನ್, ನಾಗರತ್ನ ಸೇರಿದಂತೆ ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಗೌಡ, ಜಿಲ್ಲಾ ಉಪಾಧ್ಯಕ್ಷ ಮನುಕುಮಾರ್ ರೈ, ಮುಖಂಡರಾದ ಹೆಚ್.ಕೆ. ಮಾದಪ್ಪ, ಬಿ.ಜೆ. ದೀಪಕ್, ಅಭಿಮನ್ಯುಕುಮಾರ್, ಸೋಮೇಶ್, ಲೀಲಾ ನಿರ್ವಾಣಿ, ಕಿಬ್ಬೆಟ್ಟ ಮಧು, ಶರತ್ ಚಂದ್ರ, ಜಗದೀಶ್, ಜೆಡಿಎಸ್‌ನ ಪ್ರವೀಣ್, ಕೂತಿ ಮೋಹನ್, ಕೆ.ಪಿ. ರಾಯ್ ಸೇರಿದಂತೆ ಇತರರು ಉಪಸ್ಥಿತರಿದ್ದರು.