ಸಿದ್ದಾಪುರ, ಸೆ. ೯: ನ್ಯಾಯಬೆಲೆ ಅಂಗಡಿಗಳನ್ನು ನಡೆಸುತ್ತಿರುವ ವಿತರಕರು ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಪಡಿತರದಾರರಿಗೆ ಸಮರ್ಪಕವಾಗಿ ವಿತರಣೆ ಮಾಡದಿದ್ದಲ್ಲಿ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಹೆಚ್.ಎನ್. ರಾಮಚಂದ್ರ ಎಚ್ಚರಿಸಿದರು.
ವೀರಾಜಪೇಟೆಯ ಪುರಸಭೆಯ ಸಭಾಂಗಣದಲ್ಲಿ ವೀರಾಜಪೇಟೆ ತಾಲೂಕು ನ್ಯಾಯಬೆಲೆ ಅಂಗಡಿಯ ಅಕ್ಕಿ ವಿತರಕರ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ವೀರಾಜಪೇಟೆ ತಾಲೂಕಿನ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಬಿಪಿಎಲ್ ಪಡಿತರದಾರರಿಗೆ ನೀಡುತ್ತಿರುವ ಉಚಿತ ಅಕ್ಕಿಗಳನ್ನು ಕೆಲವು ನ್ಯಾಯಬೆಲೆ ಅಂಗಡಿಗಳ ಸಿಬ್ಬಂದಿಗಳು ಸಮರ್ಪಕವಾಗಿ ನೀಡದಿರುವ ಬಗ್ಗೆ ಸಾಕಷ್ಟು ದೂರಗಳು ಬಂದಿವೆ ಎಂದರು.
ಈ ಹಿನ್ನೆಲೆಯಲ್ಲಿ ಪಡಿತರ ವಿತರಣಾ ಕೇಂದ್ರದಲ್ಲಿ ಸರಕಾರದ ವತಿಯಿಂದ ನೀಡುತ್ತಿರುವ ಉಚಿತ ಅಕ್ಕಿಯನ್ನು ನೀಡುವ ಸಮಯದ ಬಗ್ಗೆ ನಾಮಫಲಕವನ್ನು ಅಂಗಡಿಗಳ ಹೊರಭಾಗದಲ್ಲಿ ಕಾಣುವಂತೆ ಅಳವಡಿಸಬೇಕು. ನಾಮಫಲಕದಲ್ಲಿ ಬೆಳಿಗ್ಗೆ ೮ ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ಸಂಜೆ ೪ ರಿಂದ ರಾತ್ರಿ ೮ ಗಂಟೆವರೆಗೆ ಅಕ್ಕಿ ವಿತರಣೆ ಮಾಡುವ ಬಗ್ಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು. ಪ್ರತಿ ತಿಂಗಳು ಬಿಪಿಎಲ್ ಪಡಿತರದಾರರಿಗೆ ಒಬ್ಬರಿಗೆ ೫ ಕೆಜಿ ಅಕ್ಕಿಯಂತೆ ಹಾಗೂ ಎ.ವೈ. ಪಡಿತರ ಚೀಟಿದಾರರಿಗೆ ೩೫ ಕೆಜಿ ಅಕ್ಕಿ ಸರಕಾರ ನೀಡುತ್ತಿದೆ ಎಂದು ಮಾಹಿತಿ ನೀಡಿದರು. ಪಡಿತರದಾರರಿಗೆ ಪ್ರತಿ ತಿಂಗಳ ಅಕ್ಕಿಗಳನ್ನು ಆಯ ತಿಂಗಳಿನಲ್ಲಿ ಕಡ್ಡಾಯವಾಗಿ ನೀಡಬೇಕೆಂದು ನಿರ್ದೇಶಿಸಿದರು. ಸಮರ್ಪಕವಾಗಿ ಅಕ್ಕಿಗಳನ್ನು ವಿತರಣಾ ಮಾಡದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಾನೂನಿನ ರೀತಿಯ ಕ್ರಮ ಕೈಗೊಳ್ಳಲಾಗುವುದೆಂದು ಬಿಪಿಎಲ್ ಪಡಿತರದಾರರಿಗೆ. ಸಮಯಕ್ಕೆ ಸರಿಯಾಗಿ ಅಕ್ಕಿಯನ್ನು ನೀಡಬೇಕು ಯಾವುದೇ ಕಾರಣಕ್ಕೂ ಸತಾಯಿಸಬಾರದು ಎಂದರು. ಸಭೆಗೆ ವೀರಾಜಪೇಟೆ ತಾಲೂಕಿನ ವಿವಿಧ ಗ್ರಾಮಗಳ ನ್ಯಾಯಬೆಲೆ ಅಂಗಡಿಗಳ ವಿತರಕರು ಭಾಗವಹಿಸಿದ್ದರು. ಸಭೆಯಲ್ಲಿ ವೀರಾಜಪೇಟೆ ತಾಲೂಕು ಆಹಾರ ನಿರೀಕ್ಷಕಿ ಪಿ.ಆರ್. ಸೀನಕುಮಾರಿ ಹಾಗೂ ಸಿಬ್ಬಂದಿ ಕವಿತಾ ಹಾಜರಿದ್ದರು.