ಸೋಮವಾರಪೇಟೆ, ಸೆ. ೯: ಸಮೀಪದ ತಾಕೇರಿ ಗ್ರಾಮದ ಟೀಂ ತಾಕೇರಿ ವತಿಯಿಂದ ಕಿರಗಂದೂರು ಗ್ರಾಮದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲ್ಪಟ್ಟ ಕಿರಗಂದೂರು ಗ್ರಾಮ ಪಂಚಾಯಿತಿ ಮಟ್ಟದ ಲೀಗ್ ಮಾದರಿಯ ಫುಟ್ಬಾಲ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ನಾಟಿ ಮೇಕೆ ಮತ್ತು ನಾಟಿ ಕೋಳಿಗಳನ್ನು ಬಹುಮಾನವಾಗಿ ನೀಡಲಾಯಿತು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು ಹತ್ತು ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಒಂದು ತಂಡದಲ್ಲಿ ೭ ಮಂದಿ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿತ್ತು. ರೋಚಕ ಫೈನಲ್ ಪಂದ್ಯಾಟದಲ್ಲಿ ಕೀರ್ತಿ ಪೊನ್ನಪ್ಪ ನಾಯಕತ್ವದ ರಾಕ್ ಬಾಯ್ಸ್ ತಂಡ ಗೆಲುವು ಸಾಧಿಸಿತು. ಕೆ.ಡಿ.ರಕ್ಷ್ಷಿತ್ ನಾಯಕತ್ವದ ಜಾಲಿ ಬಾಯ್ಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ತೀರ್ಪುಗಾರರಾಗಿ ಪವನ್ ಕಾರ್ಯನಿರ್ವಹಿಸಿದರು. ಪ್ರಥಮ ಬಹುಮಾನ ವಾಗಿ ವಿಜೇತ ತಂಡಕ್ಕೆ ಮೇಕೆ ಹಾಗೂ ದ್ವಿತೀಯ ಬಹುಮಾನವಾಗಿ ಎರಡು ನಾಟಿ ಕೋಳಿಗಳನ್ನು ನೀಡಿದ್ದು ವಿಶೇಷವಾಗಿತ್ತು. ಗ್ರಾಮದ ಪ್ರಮುಖರು, ಗ್ರಾಮಸ್ಥರು ಕ್ರೀಡಾಕೂಟವನ್ನು ವೀಕ್ಷಿಸಿ ಸ್ಥಳೀಯ ಆಟಗಾರರಿಗೆ ಪ್ರೋತ್ಸಾಹ ತುಂಬಿದರು.