ಗೋಣಿಕೊಪ್ಪಲು, ಸೆ. ೯: ಕಳೆದ ೮ ವರ್ಷಗಳಿಂದ ಗ್ರಾಮ ಪಂಚಾಯಿತಿಗೆ ಬಾಡಿಗೆ ಪಾವತಿಸದೆ, ಕಳೆದ ೪ ವರ್ಷದಿಂದ ಕಟ್ಟಡಕ್ಕೆ ಬೀಗ ಹಾಕಿ ಮತ್ತೊಬ್ಬರಿಗೂ ವ್ಯವಹಾರ ನಡೆಸಲು ಅವಕಾಶ ನೀಡದೆ. ತಮ್ಮ ಸ್ವಂತ ಜಾಗವನ್ನಾಗಿ ಮಾಡಿಕೊಂಡು ವಾಣಿಜ್ಯ ಮಳಿಗೆಯನ್ನು ತಮ್ಮ ಸುಪರ್ಧಿಯಲ್ಲಿಯೇ ಇಟ್ಟುಕೊಂಡ ಆರೋಪದಡಿ ಹುದಿಕೇರಿ ಗ್ರಾಮ ಪಂಚಾಯಿತಿಯು ವಾಣಿಜ್ಯ ಮಳಿಗೆಗೆ ಬೀಗ ಜಡಿಯುವ ಮೂಲಕ ಕಠಿಣ ಕ್ರಮವಹಿಸಿದೆ.
ದ.ಕೊಡಗಿನ ಹುದಿಕೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಕುಪ್ಪಣಮಾಡ ಕೆ.ಕಾವೇರಮ್ಮ ಮುಂದಾಳತ್ವದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರು, ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸಮ್ಮುಖದಲ್ಲಿ ಪಟ್ಟಣದಲ್ಲಿರುವ ೨ ವಾಣಿಜ್ಯ ಮಳಿಗೆಗೆ ಬೀಗ ಜಡಿದು ಸೀಲ್ ಮಾಡಲಾಯಿತು. ಅಲ್ಲದೆ ಕಟ್ಟಡದ ಹೊರ ಭಾಗದಲ್ಲಿ ಬಾಡಿಗೆದಾರರಿಗೆ ಬಹಿರಂಗ ನೋಟಿಸ್ ಜಾರಿ ಮಾಡಲಾಯಿತು.
೨೦೧೩-೧೪ನೇ ಸಾಲಿನಲ್ಲಿ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ರೈತರ ಅನುಕೂಲಕ್ಕಾಗಿ ೨ ವಾಣಿಜ್ಯ ಮಳಿಗೆಯ ಕಟ್ಟಡವನ್ನು ಸುಮಾರು ೧೧ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆ ಸಂದರ್ಭದಲ್ಲಿ ಗ್ರಾಮದ ಹೆಚ್.ಪಿ. ಕಾವೇರಪ್ಪ ಬಿನ್ ಪೊನ್ನಪ್ಪನವರು ಗ್ರಾಮ ಪಂಚಾಯಿತಿಗೆ ಅರ್ಜಿಯನ್ನು ನೀಡಿ ವ್ಯಾಪಾರ ನಡೆಸಲು ಬಾಡಿಗೆ ಆದಾರದಲ್ಲಿ ಕಟ್ಟಡ ನೀಡುವಂತೆ ಅರ್ಜಿ ಸಲ್ಲಿಸಿದ್ದರು.
(ಮೊದಲ ಪುಟದಿಂದ) ಪಂಚಾಯಿತಿಯ ನಿರ್ಣಯದಂತೆ ೫ ವರ್ಷಕ್ಕೆ ಮುಂಗಡ ಠೇವಣಿ ೭೨ ಸಾವಿರ ಪಡೆದು ಮಾಸಿಕ ತಲಾ ೬ ಸಾವಿರದಂತೆ ೫ ವರ್ಷಗಳ ಅವಧಿಗೆ ಕರಾರು ಪತ್ರವನ್ನು ಪಂಚಾಯಿತಿ ವತಿಯಿಂದ ಮಾಡಿಕೊಡಲಾಗಿತ್ತು. ನಂತರ ಪಂಚಾಯಿತಿಗೆ ಯಾವುದೇ ರೀತಿಯ ಬಾಡಿಗೆ ಹಣ ಪಾವತಿಸಿರುವುದಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷೆ ಕುಪ್ಪಣಮಾಡ ಕೆ.ಕಾವೇರಮ್ಮ ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ಹುದಿಕೇರಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಚೆಕ್ಕೆರ ಚಂದ್ರ ಪ್ರಕಾಶ್, ಬಿದ್ದಪ್ಪ, ಕೆ.ಎ. ಗಣಪತಿ, ಬೊಜ್ಜಂಗಡ ಸುನೀಲ್ ಕುಮಾರ್, ಮಂಡಚAಡ ಪೊನ್ನಪ್ಪ, ದಮಯಂತಿ, ಹೆಚ್.ಎಸ್. ಶಿಲ್ಪ, ಎ.ಜಿ. ಮೈನಾ, ಜೆ.ಕೆ. ಬೋಜ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಅನೀಲ್ ಕುಮಾರ್, ಹುದಿಕೇರಿ ಪೊಲೀಸ್ ಠಾಣೆಯ ಎಸ್ಐ ಪ್ರಮೋದ್ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು. - ಹೆಚ್.ಕೆ. ಜಗದೀಶ್