ಮಡಿಕೇರಿ, ಸೆ. ೯: ಕೊಡಗು ಜಿಲ್ಲೆಯ ತೋಟಕ್ಕೆ ಕೆಲಸಕ್ಕಾಗಿ ಬಂದಿರುವ ಹೊರ ಜಿಲ್ಲೆ, ರಾಜ್ಯದ ಕಾರ್ಮಿಕರ ಪರಿಪೂರ್ಣ ಮಾಹಿತಿಯನ್ನು ಸಂಬAಧಪಟ್ಟ ಪೊಲೀಸ್ ಠಾಣೆಗೆ ಬೆಳೆಗಾರರು ನೀಡುವಂತೆ ಕೊಡಗು ಪ್ಲಾಂರ‍್ಸ್ ಅಸೋಸಿಯೇಷನ್ ಅಧ್ಯಕ್ಷ ಎ. ನಂದ ಬೆಳ್ಳಿಯ್ಯಪ್ಪ ಮನವಿ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಲಸೆ ಕಾರ್ಮಿಕರಿಂದ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕಳ್ಳತನಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಪೊಲೀಸ್ ಇಲಾಖೆ ಬೆಳೆಗಾರರಿಗೆ ತಮ್ಮಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರ ವಿವರಗಳನ್ನು ಇಲಾಖೆಗೆ ನೀಡಲು ವಿಫಲವಾದರೆ ಮುಂದೆ ತಮ್ಮ ಕಾರ್ಮಿಕರಿಂದ ನಡೆಯಬಹುದಾದ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆ ವಲಸೆ ಕಾರ್ಮಿಕರ ವಿವರಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಸಲ್ಲಿಸಿ ಆ ಮೂಲಕ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಇಲಾಖೆಯೊಂದಿಗೆ ಸಹಕರಿಸಲು ಮನವಿ ಮಾಡಿದ್ದಾರೆ.

ಈ ನಿಟ್ಟಿನಲ್ಲಿ ನಿಗದಿತ ನಮೂನೆಯಲ್ಲಿ ಇಲಾಖೆಗೆ ವಲಸೆ ಕಾರ್ಮಿಕರ ಹೆಸರು ಮತ್ತು ವಿಳಾಸ, ಅವರ ವಿಳಾಸದ ಹತ್ತಿರದ ಪೊಲೀಸ್ ಠಾಣೆ, ಅವರ ಕೆಲಸದ ವಿವರಗಳು, ಕುಟುಂಬದ ಸದಸ್ಯರ ವಿವರಗಳು, ಪ್ರಸ್ತುತ ಮಾಲೀಕರಲ್ಲಿ ಸೇವೆ ಸಲ್ಲಿಸಿದ ಅವಧಿ, ಅವರನ್ನು ಪ್ರಸ್ತುತ ಮಾಲೀಕರಿಗೆ ಪರಿಚಯಿಸಿ ಕರೆತಂದವರ ಹೆಸರು, ಕುಟುಂಬ ಸದಸ್ಯರೊಂದಿಗೆ ಕಾರ್ಮಿಕರ ಫೋಟೋ ಮತ್ತು ಅವರ ಆಧಾರ್ ಕಾರ್ಡ್ ಪ್ರತಿಯನ್ನು ಬೆಳೆಗಾರರು ಸಲ್ಲಿಸಿ ಅರ್ಜಿಯ ಪ್ರತಿಯಲ್ಲಿ ಸ್ವೀಕೃತಿಯನ್ನು ಪಡೆದುಕೊಳ್ಳಬೇಕು, ಅರ್ಜಿಯ ನಮೂನೆ ಸಿ.ಪಿ.ಎ, ಕಚೇರಿಯಲ್ಲಿ ಲಭ್ಯವಿರುತ್ತದೆ ಎಂದು ಮಾಹಿತಿ ಒದಗಿಸಿದ್ದಾರೆ.