ಮಡಿಕೇರಿ, ಸೆ. ೯: ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದು ಭೀತಿಗೆ ಕಾರಣವಾಗಿದೆ. ಜನವರಿಯಿಂದ ಇಲ್ಲಿಯ ತನಕ ೨೩೭ ಪ್ರಕರಣಗಳು ಅಧಿಕೃತವಾಗಿ ವರದಿಯಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ದೃಢಪಟ್ಟ ಪ್ರಕರಣ ಸೇರಿದರೆ ಸಂಖ್ಯೆ ಮತ್ತಷ್ಟು ಹೆಚ್ಚಿರುವ ಸಾಧ್ಯತೆ ಇದೆ. ಇದರೊಂದಿಗೆ ಹವಾಮಾನ ಬದಲಾವಣೆಯಿಂದ ಜನರ ಆರೋಗ್ಯ ಏರುಪೇರಾಗುತ್ತಿದ್ದು, ಜ್ವರ, ಶೀತ, ಕೆಮ್ಮು ಸೇರಿದಂತೆ ಇತರ ಕಾಯಿಲೆಗಳಿಗೆ ತುತ್ತಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ.
ನೀರಿನ ಟ್ಯಾಂಕ್, ತೊಟ್ಟಿಗಳನ್ನು ಸೊಳ್ಳೆಗಳು ಆಶ್ರಯ ತಾಣ ಮಾಡಿಕೊಂಡಿವೆ. ಅದೇ ರೀತಿ ನೀರಿನ ಸಂಗ್ರಹ ಮೂಲ ಶುಚಿಯಾಗಿ ಇಲ್ಲದಿರುವುದು ರೋಗದ ಉಲ್ಭಣಕ್ಕೆ ಕಾರಣವಾಗಿದೆ. ಮನೆ ಹಾಗೂ ಸಾರ್ವಜನಿಕ ಪ್ರದೇಶ ವಾತಾವರಣವನ್ನು ಶುಚಿಯಾಗಿ ಇಟ್ಟುಕೊಳ್ಳದಿರುವುದು ರೋಗ ಹರಡಲು ಮತ್ತೊಂದು ಕಾರಣ ಎಂದು ಆರೋಗ್ಯ ಇಲಾಖೆ ತಿಳಿಸಿದ್ದು, ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿದೆ.
ಜನವರಿಯಿಂದ ತಾ. ೫ರ ತನಕ ಜಿಲ್ಲೆಯಲ್ಲಿ ಒಟ್ಟು ೨೩೭ ಪ್ರಕರಣಗಳು ವರದಿಯಾಗಿದ್ದು, ಬಹುತೇಕ ಪ್ರಕರಣಗಳು ಗುಣಮಖವಾಗಿವೆ. ಇನ್ನೂ ಕೆಲವರ ಆರೋಗ್ಯ ಚೇತರಿಕೆ ಕಂಡಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಎಲ್ಲೆಲ್ಲಿ ಎಷ್ಟು ಪ್ರಕರಣ?
ಜಿಲ್ಲೆಯ ೫ ತಾಲೂಕುಗಳ ಪೈಕಿ ಮಡಿಕೇರಿ ತಾಲೂಕಿನಲ್ಲಿ ಇದುವರೆಗೆ ೧೪೮೬ ಮಂದಿಯನ್ನು ಡೆಂಗ್ಯೂ ಪರೀಕ್ಷೆಗೆ ಒಳಪಡಿಸಲಾಗಿದ್ದು ೪೪ ಪ್ರಕರಣಗಳು ದೃಢಪಟ್ಟಿವೆ. ಕುಶಾಲನಗರ ತಾಲೂಕಿನಲ್ಲಿ ೫೪೪ ಪರೀಕ್ಷೆಯಲ್ಲಿ ೮೬ ಪ್ರಕರಣಗಳು, ಸೋಮವಾರಪೇಟೆ ತಾಲೂಕಿನಲ್ಲಿ ೨೪೧ ಪರೀಕ್ಷೆ ಪೈಕಿ ೧೨, ಪೊನ್ನಂಪೇಟೆ ತಾಲೂಕಿನಲ್ಲಿ ೫೪೭ ಪರೀಕ್ಷೆ ಪೈಕಿ ೬೨, ವೀರಾಜಪೇಟೆ ತಾಲೂಕಿನಲ್ಲಿ ೧೭೧ ಪರೀಕ್ಷೆ ನಡೆಸಿದ ಪೈಕಿ ೩೩ ಮಂದಿಯಲ್ಲಿ ಡೆಂಗ್ಯೂ ಪಾಸಿಟಿವ್ ಫಲಿತಾಂಶ ಬಂದಿದೆ.
ಮುಂಜಾಗ್ರತೆ ವಹಿಸಲು ಸೂಚನೆ
ಹಗಲು ಹೊತ್ತಿನಲ್ಲಿ ಕಚ್ಚುವ ‘ಈಡಿಸ್ ಈಜಿಪೈ’ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಮಾಡುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಆಶಾ ಕಾರ್ಯಕರ್ತರು ವಿವಿಧ ಕಡೆಗಳಲ್ಲಿ ಅಭಿಯಾನ ಮುಂದುವರೆಸಿದ್ದಾರೆ. ಮನೆಯಲ್ಲಿನ ಸಿಮೆಂಟ್ ತೊಟ್ಟಿ, ಡ್ರಮ್, ಬ್ಯಾರಲ್, ತೆಂಗಿನ ಚಿಪ್ಪು ಸೇರಿದಂತೆ ಇತರೆ ಕಡೆಗಳಲ್ಲಿ ನೀರು ಶೇಖರಣೆಯಾಗದಂತೆ ಗಮನಹರಿ ಸಬೇಕು. ತೊಟ್ಟಿ, ಡ್ರಮ್, ಬಕೆಟ್ಗಳನ್ನು ವಾರಕ್ಕೊಮ್ಮೆ ಉಜ್ಜಿ ಸ್ವಚ್ಛಗೊಳಿಸಬೇಕು. ಸೊಳ್ಳೆಯ ಮೊಟ್ಟೆಗಳು ನೀರಿಲ್ಲದಿದ್ದರೂ ಒಂದು ವರ್ಷದವರೆಗೆ ಬದುಕಲಿವೆ. ಆದ್ದರಿಂದ ವಾರಕ್ಕೊಮ್ಮೆಯಾದರೂ ಸ್ವಚ್ಚ ಗೊಳಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
(ಮೊದಲ ಪುಟದಿಂದ) ಶೀತ ವಾತಾವರಣದಿಂದ ‘ವೈರಲ್ ಫೀವರ್’ ಪ್ರಕರಣಗಳು ಹೆಚ್ಚುತ್ತಿದ್ದು, ಬಿಸಿ ನೀರು, ಬಿಸಿಯಾದ ಪೌಷ್ಠಿಕಯುಕ್ತ ಆಹಾರ ಸೇವನೆ ಮಾಡಬೇಕು. ಜೊತೆಗೆ ಬೆಚ್ಚಗಿನ ಉಡುಪು ತೊಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.
ಡೆಂಗ್ಯೂ ಲಕ್ಷಣ ಕಂಡುಬAದರೆ ಅಂತವರಿಗೆ ಸೂಕ್ತ ಪರೀಕ್ಷೆ ನಡೆಸಿ ಪಾಸಿಟಿವ್ ಬಂದಲ್ಲಿ ತ್ವರಿತ ಚಿಕಿತ್ಸೆ ವಹಿಸಲಾಗುವುದು. ಇದೊಂದು ಸಾಂಕ್ರಮಿಕ ರೋಗ ಆಗಿರುವ ಹಿನ್ನೆಲೆ ಜನರು ಸೂಕ್ತ ಮುಂಜಾಗ್ರತೆ ವಹಿಸುವಂತೆ ಡಿಹೆಚ್ಓ ಸತೀಶ್ ಮನವಿ ಮಾಡಿದ್ದಾರೆ.
ಟಿ ಹೆಚ್.ಜೆ. ರಾಕೇಶ್