ಪೊನ್ನಂಪೇಟೆ, ಆ. ೨೬: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.)ನ ಸದಸ್ಯತ್ವ ಪಡೆಯುವುದನ್ನು ಸರಳೀಕರಣಗೊಳಿಸುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಆನ್‌ಲೈನ್ ಮೂಲಕ ಸದಸ್ಯತ್ವ ಪಡೆಯಲು ವ್ಯವಸ್ಥೆಯನ್ನು ರೂಪಿಸಲಾಗುವುದು. ಜೊತೆಗೆ ಸಂಸ್ಥೆಯ ಸದಸ್ಯರ ಸಮಗ್ರ ವಿವರಗಳನ್ನು ಡಿಜಿಟಲೀಕರಣಗೊಳಿಸ ಲಾಗುವುದು. ಈ ಕುರಿತ ರೂಪುರೇಷೆಗಳು ಅಂತಿಮಗೊAಡಿದ್ದು, ಸಿದ್ಧತೆಗಳನ್ನು ಆರಂಭಿಸಿರುವುದಾಗಿ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್ ಸೂಫಿ ಹಾಜಿ ತಿಳಿಸಿದ್ದಾರೆ. ಈ ಕುರಿತು ನಡೆದ ವಿಶೇಷ ಕಾರ್ಯಕಾರಿ ಸಮಿತಿ ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವ್ಯವಸ್ಥೆಯಿಂದ ಸಂಸ್ಥೆಯ ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಮಹಾಸಭೆಯಲ್ಲೂ ಕುರಿತು ಚರ್ಚಿಸಿ ಅನುಮೋದನೆ ಪಡೆಯಲಾಗಿದೆ. ಇವುಗಳೆಲ್ಲವನ್ನು ಪರಿಗಣಿಸಿ ಶೀಘ್ರದಲ್ಲೇ ಆನ್‌ಲೈನ್ ಸದಸ್ಯತ್ವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು. ಕೆ.ಎಂ.ಎ. ಪ್ರತಿಭಾ ಪುರಸ್ಕಾರ-೨೦೨೪ರ ವಿತರಣೆಯನ್ನು ಅಕ್ಟೋಬರ್ ತಿಂಗಳಿನಲ್ಲಿ ವೀರಾಜಪೇಟೆಯಲ್ಲಿ ನಡೆಸುವಂತೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಕುರಿತು ಶೀಘ್ರದಲ್ಲೇ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಈ ವರ್ಷ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಗಳು ಮೂರು ಹಂತದಲ್ಲಿ ನಡೆದಿದ್ದು, ಕೊನೆ ಹಂತದ ಪರೀಕ್ಷೆಯ ಫಲಿತಾಂಶ ಆಗಸ್ಟ್ ತಿಂಗಳಿನಲ್ಲಿ ಪ್ರಕಟಗೊಂಡಿರುವುದರಿAದ ಪ್ರತಿಭಾ ಪುರಸ್ಕಾರದ ಪ್ರಕ್ರಿಯೆ ಆರಂಭಿಸಲು ತಡವಾಯಿತು ಎಂದು ಸೂಫಿ ಹಾಜಿ ಹೇಳಿದರು.

೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಡೀ ಕೊಡಗು ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನ ಪಡೆಯುವ ತಲಾ ಓರ್ವ ವಿದ್ಯಾರ್ಥಿಗೆ ಅಕ್ಕಳತಂಡ ಎಸ್. ಮೊಯ್ದು ಪ್ರಾಯೋಜಿತ ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ ನೀಡುವ ಜೊತೆಗೆ ಈ ಬಾರಿ, ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ಮುಸ್ಲಿಂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಎರಡು ವಿಭಾಗದಲ್ಲೂ ಎಂ. ಎ.ಮೊಹಮ್ಮದ್ ಪ್ರಾಯೋಜಿತ ಪ್ರಥಮ ಸ್ಥಾನದ ಕೆ.ಎಂ.ಎ ವಿಶೇಷ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸುವಂತೆ ನಿರ್ಧರಿಸಲಾಗಿದೆ ಎಂದು ಸೂಫಿ ಹಾಜಿ ವಿವರಿಸಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಕೋಶಾಧಿಕಾರಿ ಹರಿಶ್ಚಂದ್ರ ಎ.ಹಂಸ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್ ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.