ಕುಶಾಲನಗರ, ಆ. ೨೬: ಕರ್ನಾಟಕ ರಾಜ್ಯ ಪತ್ರದ ಅಧಿಸೂಚನೆಯಂತೆ ಕುಶಾಲನಗರ ಪುರಸಭೆ ಘೋಷಣೆಯಾಗಿದ್ದು, ಇದೀಗ ಪುರಸಭೆಯಲ್ಲಿ ವಿಲೀನ ಗೊಂಡಿರುವ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಪುನರ್ ಸ್ಥಾಪಿಸುವಂತೆ ಆಗ್ರಹಿಸುತ್ತಿರುವುದು ಹಾಸ್ಯಾಸ್ಪದ ವಾಗಿದೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ ಪಿ ಶಶಿಧರ್ ಹೇಳಿದ್ದಾರೆ. ಅವರು ಕುಶಾಲನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಈ ಬಗ್ಗೆ ಮಾತನಾಡಿ, ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾಗಿರುವ ಶಿವಾನಂದ ಮತ್ತು ಇತರರು ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಯಥಾ ಸ್ಥಿತಿಯಲ್ಲಿ ಮತ್ತೆ ಸ್ಥಾಪಿಸಬೇಕೆಂದು ಆಗ್ರಹಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಕುಶಾಲನಗರ ಪಟ್ಟಣ ಪಂಚಾಯಿತಿಯ ಎರಡನೇ ಅವಧಿಯ ಚುನಾವಣೆಯ ವಿಷಯದಲ್ಲಿ ಕ್ಷೇತ್ರದ ಶಾಸಕರನ್ನು ಅನಾವಶ್ಯಕವಾಗಿ ಪ್ರಸ್ತಾಪಿಸಿರುವುದು ಖಂಡನೀಯ. ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಲ್ಲಿಸಿ ಚುನಾವಣೆಗೆ ತಡೆಯಾಜ್ಞೆಯನ್ನು ಶಿವಾನಂದ ಅವರೇ ತಂದಿರುತ್ತಾರೆ. ಅಲ್ಲದೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ೨೦೨೨ ರಲ್ಲಿ ನಿರ್ಣಯ ಕೈಗೊಂಡು ತಮ್ಮ ಆಡಳಿತವನ್ನು ರದ್ದುಗೊಳಿಸುವ ಮೂಲಕ ಪುರಸಭೆ ರಚನೆಗೆ ಅವಕಾಶ ಮಾಡಿಕೊಟ್ಟಿರುತ್ತಾರೆ.

ಪುರಸಭೆಗೆ ವಿಲೀನಗೊಂಡ ವೇಳೆಗೆ ಗ್ರಾಮ ಪಂಚಾಯಿತಿ ಸದಸ್ಯತ್ವ ರದ್ದತಿಯಾಗಿದೆ. ಇದೀಗ ಶಿವಾನಂದ ಮತ್ತು ಕೆಲವರು ಜನರಲ್ಲಿ ಗೊಂದಲ ಉಂಟು ಮಾಡುತ್ತಿರುವ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಶಾಸಕರು ಮುಳ್ಳುಸೋಗೆ ಗ್ರಾಮ ವ್ಯಾಪ್ತಿಯ ನಾಗರಿಕರನ್ನು ಕಡೆಗಣನೆ ಮಾಡುತ್ತಿರುವ ಆರೋಪ ಸುಳ್ಳು ಎಂದು ಹೇಳಿದ ಶಶಿಧರ್ ಕಳೆದ ಹಲವು ಸಮಯದಿಂದ ಮುಳ್ಳುಸೋಗೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಜನಪರ ಕಾರ್ಯ ನಡೆಯುತ್ತಿದೆ ಎಂದರು.

ಪುರಸಭೆ ನಾಮಕರಣ ವಿಷಯದಲ್ಲಿ ಸಂಶಯವಿದ್ದಲ್ಲಿ ಹುಸಿ ಭರವಸೆಗಳನ್ನು ನೀಡಿದ ಮಾಜಿ ಶಾಸಕರಲ್ಲಿ ಸ್ಪಷ್ಟೀಕರಣ ಕೇಳಲಿ ಎಂದು ಶಶಿಧರ್ ಹೇಳಿದರು. ಮುಳುಸೋಗೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಕುಶಾಲನಗರ ಪುರಸಭೆಯ ನಾಲ್ಕು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಸಮಗ್ರ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು. ಈ ನಡುವೆ ಪುರಸಭೆಗೆ ನಾಮನಿರ್ದೇಶನಗೊಂಡ ಸದಸ್ಯರುಗಳು ಕೂಡ ನಿರಂತರವಾಗಿ ಗ್ರಾಮದ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತಿದ್ದಾರೆ ಎಂದು ಶಶಿಧರ್ ಹೇಳಿದರು.

ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆಗಳನ್ನು ನೀಡುತ್ತಾ ಹತಾಶರಾಗುವುದು ಬೇಡ ಎಂದು ಹೇಳಿದ ಶಶಿಧರ್ ಗ್ರಾಮದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕಾಗಿದೆ ಎಂದರು.

ಪುರಸಭೆಗೆ ನಾಮ ನಿರ್ದೇಶಿತ ಸದಸ್ಯರಾಗಿರುವ ಜಿ.ಬಿ. ಜಗದೀಶ್, ಹರೀಶ್, ನವೀನ್ ಪ್ರಕಾಶ್, ಪದ್ಮ ಅವರುಗಳು ಮಾತನಾಡಿ, ಮುಳ್ಳುಸೋಗೆ ಗ್ರಾಮ ಶಾಸಕರ ಸಲಹೆ ಸೂಚನೆಯಂತೆ ಸಮಗ್ರ ಅಭಿವೃದ್ಧಿ ಕಾಣುತ್ತಿದೆ. ಶಾಸಕರನ್ನು ಅನಾವಶ್ಯಕವಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವಿಷಯದಲ್ಲಿ ಎಳೆದು ತರುವುದು ಬೇಡ. ತಮ್ಮ ಅವಧಿಯಲ್ಲಿ ನಡೆಸಿದ ಕೆಲಸ ಕಾರ್ಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.