ಸೋಮವಾರಪೇಟೆ, ಆ. ೨೬: ಭೂಲೋಕದ ಸ್ವರ್ಗದಂತಿರುವ ಕೊಡಗಿನ ಭೂಮಿಯನ್ನು ಮೂಲ ನಿವಾಸಿಗಳು ಎಂದಿಗೂ ಮಾರಾಟ ಮಾಡಬಾರದು. ಪ್ರಪಂಚದ ವಿಶಿಷ್ಟ ಭೌಗೋಳಿಕತೆಯನ್ನು ಹೊಂದಿರುವ ಜಿಲ್ಲೆಯಲ್ಲಿ ಕೃಷಿ ಕಾರ್ಯ ಸ್ಥಗಿತಗೊಳ್ಳಬಾರದು ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಕಿವಿಮಾತು ಹೇಳಿದರು.

ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್ ವತಿಯಿಂದ ಸಮೀಪದ ಗೌಡಳ್ಳಿ ಗ್ರಾಮದ ರಾಜು ಅವರ ಗದ್ದೆಯಲ್ಲಿ ಆಯೋಜಿಸಿದ್ದ ೬ನೇ ವರ್ಷದ ನಾಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ಪಟ್ಟಣಕ್ಕೆ ವಲಸೆ ಹೋಗುತ್ತಿದ್ದು, ಪಟ್ಟಣಗಳಲ್ಲಿ ಬದುಕು ಕಟ್ಟಿಕೊಂಡರೂ ಸಹ ನಮ್ಮ ಮೂಲ ನೆಲೆಯ ಸಂಪರ್ಕವನ್ನು ಕಡಿದುಕೊಳ್ಳಬಾರದು. ಕೃಷಿ ಭೂಮಿಯನ್ನು ಬರಡಾಗಿಸದೇ ವ್ಯವಸಾಯ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಭತ್ತದ ಗದ್ದೆಗಳು ಪಾಳು ಬೀಳುತ್ತಿರುವುದು ಕಳವಳಕಾರಿ. ಈ ನಿಟ್ಟಿನಲ್ಲಿ ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್‌ನಿಂದ ಪ್ರತಿ ವರ್ಷ ಭತ್ತ ನಾಟಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಆಯೋಜಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಮಾತನಾಡಿ, ಕಳೆದ ೨೦೧೮ರಲ್ಲಿ ಆರಂಭಗೊAಡ ಸಂಘಟನೆಯು ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಬದುಕಿನ ಮೂಲವಾಗಿರುವ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಗದ್ದೆ ನಾಟಿ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ. ಇಂದಿನ ದಿನಗಳಲ್ಲಿ ಊಟಕ್ಕೆ ಬಳಸುವ ಅಕ್ಕಿಯ ಉತ್ಪಾದನೆ ಹೇಗೆಂಬುದೇ ಹಲವಷ್ಟು ಮಕ್ಕಳಿಗೆ ತಿಳಿದಿಲ್ಲ. ಐ.ಟಿ., ಬಿ.ಟಿ. ಕಂಪೆನಿಯ ಉದ್ಯೋಗಿಗಳಿಗೂ ಕೃಷಿಯ ಬಗ್ಗೆ ಅರಿವಿಲ್ಲ. ಈ ನಿಟ್ಟಿನಲ್ಲಿ ಸಂಘಟನೆ ವತಿಯಿಂದ ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹೆಚ್.ಎನ್. ರವೀಂದ್ರ ಮಾತನಾಡಿ, ಕೃಷಿ ಭೂಮಿಯ ಉಳಿವಿಗೆ ಎಲ್ಲರೂ ಮನಸ್ಸು ಮಾಡಬೇಕಿದೆ. ಮಿಶ್ರ ಬೇಸಾಯ ಪದ್ಧತಿಯಿಂದ ಲಾಭಗಳಿಸಬಹುದು. ಕೃಷಿ ಭೂಮಿ ಎಂದಿಗೂ ರೈತರನ್ನು ಕೈ ಬಿಡುವುದಿಲ್ಲ ಎಂದರು. ಪ್ರಗತಿ ಪರ ಕೃಷಿಕ ಪೊನ್ನಂಪೇಟೆಯ ರವಿಶಂಕರ್ ಮಾತನಾಡಿ, ಕೃಷಿ ಭೂಮಿಯ ಸದ್ಬಳಕೆ ಆಗಬೇಕಿದೆ. ರೈತರಿಂದಲೇ ದೇಶ ಎಂಬುದನ್ನು ಮನಗಂಡು ಸರ್ಕಾರಗಳೂ ಸಹ ಕೃಷಿಗೆ ಹೆಚ್ಚು ಉತ್ತೇಜನ ನೀಡಬೇಕಿದೆ ಎಂದರು. ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕಾಳಪ್ಪ, ಗ್ರಾ.ಪಂ. ಸದಸ್ಯ ನವೀನ್ ಅಜ್ಜಳ್ಳಿ ಅವರುಗಳು ಮಾತನಾಡಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ನಾಗರಾಜ್, ಕಾಫಿ ಮಂಡಳಿ ಅಧಿಕಾರಿ ಲಕ್ಷಿö್ಮÃಕಾಂತ್, ವಿಎಸ್‌ಎಸ್‌ಎನ್ ಉಪಾಧ್ಯಕ್ಷೆ ಮಮತ, ಬಿಜಿಎಸ್ ಶಾಲೆಯ ಪ್ರಾಂಶುಪಾಲೆ ರತ್ನ, ರೋಟರಿ ಅಧ್ಯಕ್ಷ ಜೆ.ಕೆ. ಪೊನ್ನಪ್ಪ, ಪ್ರಣವ್ ಫೌಂಡೇಷನ್ ಅಧ್ಯಕ್ಷ ರಾಕೇಶ್ ರೈ, ಗದ್ದೆ ಮಾಲೀಕ ಜಿ.ಎಸ್. ರಾಜು ಉಪಸ್ಥಿತರಿದ್ದರು.

ಅಸೋಸಿಯೇಷನ್ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ, ಪ್ರಧಾನ ಕಾರ್ಯದರ್ಶಿ ಸಜನ್ ಮಂದಣ್ಣ, ಖಜಾಂಚಿ ಮೋಹಿತ್ ತಿಮ್ಮಯ್ಯ, ನಿರ್ದೇಶಕರಾದ ಜೀವನ್‌ಕುಮಾರ್, ಆದರ್ಶ್ ತಮ್ಮಯ್ಯ, ವಿನಯ್ ಕುಶಾಲಪ್ಪ, ಸಮರ್ಥ್, ಪ್ರೇಮ್‌ಸಾಗರ್, ಚಿರಂಜೀವಿ, ಆಶಿಕ್, ಜೈಕೀರ್ತಿ, ಜನಾರ್ದನ್, ಅಶ್ವಿನಿ ಕೃಷ್ಣಕಾಂತ್ ಸೇರಿದಂತೆ ಇತರರು ಕಾರ್ಯಕ್ರಮ ನಿರ್ವಹಿಸಿದರು. ಬಿಜಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಅತಿಥಿಗಳು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಭತ್ತ ಕೃಷಿಯ ಬಗ್ಗೆ ಜಾಗೃತಿ ಮೂಡಿಸಿದರು.