ಮಡಿಕೇರಿ, ಆ. ೨೬: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಸಿ.-ಎಸ್.ಟಿ. ಜನಾಂಗದ ಕುಂದು ಕೊರತೆ ಸಭೆ ಇಲ್ಲಿನ ಡಿವೈಎಸ್‌ಪಿ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಠಾಣಾ ವ್ಯಾಪ್ತಿಯ ವಿವಿಧೆಡೆಗಳಿಂದ ಆಗಮಿಸಿದ ಜನರು ಸಮಸ್ಯೆಗಳ ಬಗ್ಗೆ ಇಲಾಖೆಯ ಗಮನಕ್ಕೆ ತಂದು ಪರಿಹಾರಕ್ಕೆ ಮನವಿ ಮಾಡಿದರು.

ಹೆಚ್.ಕೆ. ಮೊಣ್ಣಪ್ಪ ಮಾತನಾಡಿ, ಮಾದಕ ವಸ್ತು ಸೇವನೆ, ಮಾರಾಟ ಪ್ರಕರಣವನ್ನು ಪತ್ತೆಹಚ್ಚಿ ಶಿಕ್ಷೆ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಕ ಶಿಕ್ಷೆ ನೀಡಬೇಕು. ಮೌಖಿಕ ದೂರುಗಳನ್ನು ಸ್ವೀಕರಿಸುವಂತಾಗಬೇಕು. ‘ನೈಟ್ ಬೀಟ್’ ಪೊಲೀಸರು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದದರು. ಜಿಲ್ಲಾಧಿಕಾರಿ ಮಟ್ಟದಲ್ಲಿ ಎಸ್.ಸಿ.-ಎಸ್.ಟಿ. ಕುಂದುಕೊರತೆ ನಿವಾರಣಾ ಸಮಿತಿಯಿದ್ದು, ಅದು ಪುನರ್ ರಚನೆಯಾಗಿಲ್ಲ. ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಸಂಬAಧಿಸಿದವರ ಗಮನ ಸೆಳೆಯುವಂತೆ ಪ್ರಸ್ತಾಪಿಸಿದರು.

ಮೂರ್ನಾಡು ಗ್ರಾ.ಪಂ. ಸದಸ್ಯ ಸುಬ್ಬಯ್ಯ ಮಾತನಾಡಿ, ವಿವಿಧೆಡೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಿಸಿ ಕ್ಯಾಮರ ಅಳವಡಿಕೆ ಪೊಲೀಸ್ ಇಲಾಖೆಯಿಂದ ಮಾಡಬೇಕೆಂದು ಗಮನ ಸೆಳೆದರು.

ಹೆರವÀನಾಡು ಬಳಿ ರೆಸಾರ್ಟ್ ನಿರ್ಮಾಣ ಉದ್ದೇಶಕ್ಕೆ ಬೃಹತ್ ಪ್ರಮಾಣದ ಮರ ಹನನವಾಗಿದ್ದು, ಮುಂದಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪದ ಭಯ ಜನರನ್ನು ಕಾಡುತ್ತಿದೆ. ಈ ಬಗ್ಗೆ ಕ್ರಮವಹಿಸುವಂತೆ ಅಪ್ಪಂಗಳದ ರಘು ಒತ್ತಾಯಿಸಿದರು.

ಗಣೇಶೋತ್ಸವದಲ್ಲಿ ಡಿ.ಜೆ. ಬಳಕೆಗೆ ವಿನಾಯಿತಿ ನೀಡುವಂತೆೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಜನರು ಬೇಡಿಕೆ ಮುಂದಿಟ್ಟರು.

ಇನ್ಸ್ಪೆಕ್ಟರ್ ಉಮೇಶ್ ಉಪ್ಪಳಿಕೆ ಮಾತನಾಡಿ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಈ ನಡುವೆಯೂ ಉತ್ತಮವಾಗಿ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ನೈಟ್ ಬೀಟ್ ಪೊಲೀಸ್ ಹೆಚ್ಚಳಕ್ಕೆ ಕ್ರಮವಹಿಸ ಲಾಗುವುದು. ಜನರು ಕೂಡ ಅಪರಾಧ ನಡೆದ ಸಂದರ್ಭ ಮಾಹಿತಿ ನೀಡಿದರೆ ಶೀಘ್ರ ತಪ್ಪಿತಸ್ಥರನ್ನು ಬಂಧಿಸಲು ಸಾಧ್ಯವಿದೆ. ಅಪರಾಧ ತಡೆಗೆ ಪ್ರತಿಯೊಬ್ಬರು ಕೈಜೋಡಿಸುವಂತೆ ತಿಳಿಸಿದರು.

ಈ ಸಂದರ್ಭ ಇನ್ಸ್ಪೆಕ್ಟರ್‌ಗಳಾದ ಶ್ರೀನಿವಾಸ್, ವೆಂಕಟ್, ಶ್ರೀನಿವಾಸಲು ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.