ಮಡಿಕೇರಿ, ಆ. ೨೬: ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯೆ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಮ್ಮ ಮಾವ ಮತ್ತು ಅತ್ತೆಯವರಾದ ದಿ. ಹಂಚೆಟ್ಟಿರ ಕುಟ್ಟಪ್ಪ ಮತ್ತು ಕಾಮವ್ವ ದಂಪತಿ ಜ್ಞಾಪಕಾರ್ಥ ರೂ ೫೦ ಸಾವಿರ ದತ್ತಿನಿಧಿ ಸ್ಥಾಪಿಸಿದ್ದಾರೆ.
ಕೊಡಗಿನ ಜಾನಪದ ಪ್ರಕಾರಗಳ ಹಿನ್ನೆಲೆ, ಹಾಡು, ಕುಣಿತಗಳ ಕುರಿತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸುವುದು. ಕೊಡಗಿನ ಒಂದು ಪದವಿ ಕಾಲೇಜಿನಿಂದ ಓರ್ವ ವಿದ್ಯಾರ್ಥಿಗೆ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ. ಕೊಡಗಿನ ಜಾನಪದ ಕುರಿತು ಉಪನ್ಯಾಸ ಏರ್ಪಡಿಸುವುದು ದತ್ತಿಯ ಆಶಯವಾಗಿದೆ
ದತ್ತಿಯ ಮೊತ್ತದ ಚೆಕ್ ಅನ್ನು ಜಿಲ್ಲಾ ಕಸಾಪದ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ರವರು ಮೂರ್ನಾಡು ಹೋಬಳಿ ಕಸಾಪದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್, ಸದಸ್ಯರಾದ ಬೊಳ್ಳಜಿರ ಅಯ್ಯಪ್ಪ ಮತ್ತಿತರರ ಸಮ್ಮುಖದಲ್ಲಿ ಸ್ವೀಕರಿಸಿದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಡಿಕೇರಿ, ಆ. ೨೬: ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ, ರಾಜ್ಯದ ಮಾಜಿ ಸಚಿವರೂ ಆದ ದಿ. ದಂಬೆಕೋಡಿ ಎ. ಚಿಣ್ಣಪ್ಪನವರ ಹೆಸರಿನಲ್ಲಿ ಅವರ ಪತ್ನಿ ದಂಬೆಕೋಡಿ ಲೀಲಾವತಿ ಚಿಣ್ಣಪ್ಪ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ರೂ. ೫೦,೦೦೦ ವನ್ನು ದತ್ತಿನಿಧಿಯಾಗಿ ಸ್ಥಾಪಿಸಿದ್ದಾರೆ. ಮಡಿಕೇರಿ ತಾಲೂಕಿನ ವಿದ್ಯಾರ್ಥಿಗಳಲ್ಲಿ ಹತ್ತನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯನ್ನು ಗೌರವಿಸಿ, ನಗದು ಬಹುಮಾನ ಮತ್ತು ಪಾರಿತೋಷಕ ನೀಡಿ ಪ್ರೋತ್ಸಾಹಿಸುವುದು ದತ್ತಿಯ ಆಶಯವಾಗಿದೆ.
ದತ್ತಿಯ ಮೊತ್ತದ ಚೆಕ್ ಅನ್ನು ಜಿಲ್ಲಾ ಕಸಾಪದ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಕೆ.ಟಿ. ಬೇಬಿ ಮ್ಯಾಥ್ಯು ದಂಬೆಕೋಡಿ ಲೀಲಾವತಿ ಚಿಣ್ಣಪ್ಪರವರಿಂದ ಸ್ವೀಕರಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.