ವೀರಾಜಪೇಟೆ, ಆ. ೨೫: ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದು ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವೀರಾಜಪೇಟೆ ಶಾಖೆಯಿಂದ ಪ್ರತಿಭಟನೆ ಮಾಡಲಾಯಿತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವೀರಾಜಪೇಟೆ ಶಾಖೆಯ ವತಿಯಿಂದ ನಗರದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ವೇಳೆ ಮಾತನಾಡಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಮರಾಠಿ ಅವರು ಇಂತಹ ಘಟನೆಗಳು ಜಾಗೃತ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ ಎಂದರು. ಎ.ಬಿ.ವಿ.ಪಿ. ಜಿಲ್ಲಾ ಪ್ರಮುಖ್ ಕೌಶಲ್ಯ ಕೆ.ಹೆಚ್. ಅವರು ಮಾತನಾಡಿ, ರಾಜ್ಯದಲ್ಲಿ ಪದವಿಪೂರ್ವ ಮತ್ತು ಪದವಿ ಕಾಲೇಜುಗಳು ಆರಂಭವಾಗಿದ್ದರೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ ಆರಂಭವಾಗದಿರುವುದು. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದರೂ ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿ ವೇತನ ಬಾರದಿರುವುದು ವಿದ್ಯಾರ್ಥಿ ಜೀವನಕ್ಕೆ ಕುಂದು ಬಂದಿದೆ. ಅಲ್ಲದೆ ಕಾಲೇಜುಗಳಲ್ಲಿ ವಿವಿಧ ಭಾಗಗಳಿಗೆ ನಿಗದಿತ ಉಪನ್ಯಾಸಕರು ಇಲ್ಲದಿರುವುದರಿಂದ ಸಮಸ್ಯೆಯಾಗಿದೆ. ಸರ್ಕಾರವು ಹಾಸ್ಟೆಲ್‌ಗಳನ್ನು ಶೀಘ್ರವಾಗಿ ಆರಂಭಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ತಾಲೂಕು ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಕೀರ್ತನ್ ಕಾವೇರಪ್ಪ, ಜಿಲ್ಲಾ ಸಹ ಸಂಚಾಲಕ ಮೋನಿಶ್ ಮಂದಣ್ಣ, ತಾಲೂಕು ಸಂಚಾಲಕಿ ರಕ್ಷಿತಾ ಬಿ.ಎಸ್, ಮೋಹಿತ್ ಬಿ.ಯು. ನಿತಿನ್ ಬಿದ್ದಪ್ಪ ಎಂ.ಯು. ಭೂಮಿಕ, ರೋಷನ್, ಮನೀಶ್ ಮತ್ತು ವಿದ್ಯಾರ್ಥಿ ಪ್ರಮುಖರು ಹಾಜರಿದ್ದರು.