ಸಿದ್ದಾಪುರ, ಆ. ೨೫: ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದ ಮರಿಯಾನೆಗಳು ಸೇರಿದಂತೆ ೨೮ಕ್ಕೂ ಅಧಿಕ ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾಡಿಗಟ್ಟುವಲ್ಲಿ ಯಶಸ್ವಿಯಾದರು.

ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ಬಾಡಗ ಬಾಣಂಗಲ ಗ್ರಾಮದ ಮಾರ್ಗೋಳ್ಳಿ ಹಾಗೂ ಘಟ್ಟದಳ ಭಾಗದ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟದೊಳಗೆ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದವು. ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಾಡಾನೆಗಳನ್ನು ಕಾಡಿಗಟ್ಟಲು ಒತ್ತಾಯಿಸಿದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಆನೆ ಕಾರ್ಯಪಡೆ ಮತ್ತು ಆರ್.ಆರ್.ಟಿ. ತಂಡದ ಸಿಬ್ಬಂದಿಗಳು ಸೇರಿ ಮಳೆ ನಡುವೆ ಕಾಫಿ ತೋಟಗಳಿಂದ ಆನೆ ಹಿಂಡನ್ನು ಕಾಡಿಗೆ ಓಡಿಸಿದರು. ಕಾಡಾನೆಗಳು ಕಾಫಿ ತೋಟಗಳಿಂದ ಅರಣ್ಯದತ್ತ ತೆರಳಲು ಹಿಂದೇಟು ಹಾಕಿದವು. ಆದರೂ ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಸಿಬ್ಬಂದಿಗಳ ಅವಿರತ ಶ್ರಮದಿಂದ ಗುಂಪಾಗಿದ್ದ ಕಾಡಾನೆಗಳನ್ನು ಮಾಲ್ದಾರೆ ಅರಣ್ಯ ಪ್ರದೇಶಕ್ಕೆ ಓಡಿಸಿದರು. ಆದರೆ, ಕೆಲವು ಗುಂಪುಗಳ ಕಾಡಾನೆಗಳು ಕಾಫಿ ತೋಟಗಳಲ್ಲಿ ಉಳಿದುಕೊಂಡಿವೆ. ಈ ಸಂದರ್ಭದಲ್ಲಿ ಮರಿ ಆನೆಗಳು ಸೇರಿದಂತೆ ೨೮ ಕಾಡಾನೆಗಳು ಕಾರ್ಯಾಚರಣೆ ತಂಡಕ್ಕೆ ಕಂಡುಬAದಿತು. ಅರಣ್ಯಕ್ಕೆ ಅಟ್ಟಿದ ಕಾಡಾನೆಗಳ ಪೈಕಿ ಕೆಲವು ಮರಳಿ ಕರಡಿಗೋಡು ಭಾಗಕ್ಕೆ ಹಿಂತಿರುಗಿ ಬಂದಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಸರಕಾರವು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವರದಿ: ವಾಸು