ಮಡಿಕೇರಿ, ಆ. ೨೫: ಕೊಡಗಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿ ಅದರ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದವರು ದಿವಂಗತ ಡಿ.ಜೆ ಪದ್ಮನಾಭ ಅವರು, ಅಂದು ನೆಟ್ಟ ಗಿಡ ಇಂದು ಹೆಮ್ಮರವಾಗಿ ಬೆಳೆದು ನಾಲ್ಕು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿ ಪ್ರತಿ ವರ್ಷವೂ ನೂರಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ನುಡಿದರು.

ಅವರು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಅಮ್ಮತ್ತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರಕಾರಿ ಪ್ರೌಢಶಾಲೆ ಪಾಲಿಬೆಟ್ಟ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ದಿ. ಡಿ.ಜೆ. ಪದ್ಮನಾಭ ಮತ್ತು ಬಿ.ಆರ್. ಸಾಯಿನಾಥ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಂದುವರೆದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಜಿಲ್ಲಾಧ್ಯಕ್ಷರಾಗಿ ೨೩ ವರ್ಷಗಳ ಕಾಲ ಕನ್ನಡ ಸಾಹಿತ್ಯ, ಭಾಷೆ, ನಾಡು-ನುಡಿ, ಸಂಸ್ಕೃತಿ, ಪರಂಪರೆಗಳನ್ನು ಬೆಳೆಸುವಲ್ಲಿ ಅವಿರತ ಶ್ರಮಿಸಿದ್ದಾರೆ. ಅವರ ಪರಿಶ್ರಮದಿಂದ ಸರಕಾರ ಕನ್ನಡ ಸಾಹಿತ್ಯ ಪರಿಷತ್ತಿಗೆ ೬೦ ಸೆಂಟುಗಳ ಸ್ಥಳವನ್ನು ಕನ್ನಡ ಭವನ ಕಟ್ಟಲು ಮಂಜೂರು ಮಾಡಿತ್ತು. ಜಿಲ್ಲೆಗೆ ರಾಜ್ಯದ ಹಿರಿಯ ಸಾಹಿತಿಗಳನ್ನು ಚಲನಚಿತ್ರ ನಟರನ್ನು ಕನ್ನಡ ಹೋರಾಟಗಾರರನ್ನು ಕರೆತಂದು ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಿ ಜನರಿಗೆ ಅವರನ್ನು ಪರಿಚಯಿಸಿದ ಖ್ಯಾತಿ ಡಿ.ಜೆ ಪದ್ಮನಾಭರವರದ್ದು ಎಂದರು.

ಸೋಮವಾರಪೇಟೆಯವರಾಗಿದ್ದು ಬೆಂಗಳೂರಿನಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿರುವ ಬಿ.ಆರ್ ಸಾಯಿನಾಥ್ ಅವರು ವಿದ್ಯಾರ್ಥಿಗಳಿಗೆ ಕವಿ ಕಾವ್ಯ ಪರಿಚಯ ಮಾಡಬೇಕು ಎನ್ನುವ ನಿಟ್ಟಿನಲ್ಲಿ ದತ್ತಿ ಸ್ಥಾಪಿಸಿದ್ದು, ವೀರಾಜಪೇಟೆಯ ಶಾಂತ ಪದ್ಮನಾಭ ಮತ್ತು ರಾಜೇಶ್ ಪದ್ಮನಾಭ ರವರು ದಿ. ಡಿ.ಜೆ. ಪದ್ಮನಾಭ ರವರ ಜ್ಞಾಪಕಾರ್ಥ ಕೊಡಗಿನ ಜಾನಪದ ಕಲೆಗಳ ಕುರಿತಾಗಿ ಉಪನ್ಯಾಸ ನೀಡುವ ಸಲುವಾಗಿ ದತ್ತಿ ಸ್ಥಾಪಿಸಿರುತ್ತಾರೆ ಎಂದರು.

ಕೊಡಗು ಜಿಲ್ಲೆಯಲ್ಲಿ ೫೬ ಬಗೆಗಳ ಜಾನಪದ ಕಲೆಗಳಿವೆ. ಕರ್ನಾಟಕ ರಾಜ್ಯದ ಜಾನಪದ ಶೈಲಿಗೆ ಹೋಲಿಸಿದರೆ ಅದು ವಿಭಿನ್ನ ಮತ್ತು ವೈಶಿಷ್ಟö್ಯ ಪೂರ್ಣವಾಗಿದೆ ಎಂದು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕೊಡಗಿನಲ್ಲಿ ಜಾನಪದ ಕಲೆಗಳು ಕುರಿತು ಮಾತನಾಡಿದ ಸಂತ ಅನ್ನಮ್ಮ ಪದವಿ ಕಾಲೇಜಿನ ಅರ್ಥಶಾಸ್ತç ಉಪನ್ಯಾಸಕ ಬಿ.ಎನ್. ಶಾಂತಿಭೂಷಣ್ ನುಡಿದರು.

ಕವಿ ಕಾವ್ಯ ಪರಿಚಯದ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡಿದ ದೇವಣಗೇರಿ ಬಿ.ಸಿ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಲೋಕೇಶ್ ಹೆಚ್.ಡಿ. ಅವರು ವಿಶ್ವ ಕವಿಗಳ ದಿನವಾದ ಇಂದು ಕವಿ ಕಾವ್ಯ ಕುರಿತು ಉಪನ್ಯಾಸ ಮಂಡಿಸಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ಸಲ್ಲಿಸುತ್ತಾ ಎಷ್ಟು ಕಾವ್ಯಗಳನ್ನು ಬರೆದರೆ ಕವಿಯಾಗಬಹುದು ಎನ್ನುವ ಸಾಹಿತ್ಯಾಸಕ್ತರ ಪ್ರಶ್ನೆಗೆ ದ.ರಾ. ಬೇಂದ್ರೆ ಅವರು ಉತ್ತರಿಸುತ್ತಾ ಕೇವಲ ಒಂದು ಕವನ ಬರೆದರೂ, ಸಾವಿರ ಕವನ ಬರೆದರು ಆತ ಕವಿಯೇ, ಆದರೆ ಆ ಕವನ ಸಾವು ಇರದ (ಸಾವಿರದ) ಕವನವಾಗಿರಬೇಕು ಎಂದು ಹೇಳಿದ್ದನ್ನು ಜ್ಞಾಪಿಸಿಕೊಂಡರು.

ಶಾಲೆಯ ವಿದ್ಯಾರ್ಥಿಗಳು ಕಂಸಾಳೆ ನೃತ್ಯ, ನಾಡಿನ ನುಡಿಯ ಕುರಿತು ನೃತ್ಯ ಮತ್ತು ಹಾಡುಗಳನ್ನು ಪ್ರಸ್ತುತಪಡಿಸಿದ್ದರು. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕಿರಣ್ ಹೆಚ್.ಆರ್. ಪ್ರಥಮ ಬಹುಮಾನ ಪಡೆದರೆ ದಿಲೀಪ್ ದ್ವಿತೀಯ ಬಹುಮಾನ ಪಡೆದರು. ಕನ್ನಡ ಸಾಹಿತ್ಯ ಪರಿಷತ್ತಿನ ವೀರಾಜಪೇಟೆ ತಾಲೂಕು ಗೌರವ ಕಾರ್ಯದರ್ಶಿ ಟಾಮಿ ಥೋಮಸ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಮತ್ತಿ ಹೋಬಳಿ ಕಸಾಪ ಅಧ್ಯಕ್ಷ ಟಿ.ಹೆಚ್. ಮಂಜುನಾಥ್ ಮಾತನಾಡಿದರು.

ವೇದಿಕೆಯಲ್ಲಿ ಪಾಲಿಬೆಟ್ಟದ ಸರಕಾರಿ ಪ್ರೌಢಶಾಲೆಯ ಪ್ರಬಾರ ಮುಖ್ಯೋಪಾಧ್ಯಾಯ ಅಶ್ರಫ್, ವೀರಾಜಪೇಟೆ ತಾಲೂಕು ಗೌರವ ಕಾರ್ಯದರ್ಶಿ ಸಾವಿತ್ರಿ ಹೆಚ್.ಜಿ., ಜಿಲ್ಲಾ ನಿರ್ದೇಶಕ ವಿ.ಟಿ. ಮಂಜುನಾಥ್, ದಿ. ಸೀತಾಬಾಯಿ ರಾಮಚಂದ್ರ ಕಾಮತ್ ದತ್ತಿನಿಧಿಯ ದಾನಿಗಳಾದ ಆರ್. ರಾಜರಾವ್, ಕಲಾವಿದ ಬಾವಾ ಮಾಲ್ದಾರೆ, ಸಾಹಿತ್ಯ ಪರಿಷತ್ತಿನ ಸದಸ್ಯರಾದ ಎಫ್.ಎಲ್. ಫ್ಯಾಟ್ರಿಕ್, ಯುವರಾಜ್, ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಅಶ್ರಫ್ ಸ್ವಾಗತಿಸಿದರು. ಅಧ್ಯಾಪಕರುಗಳಾದ ನಯನ ಕುಮಾರಿ, ಮಮತಾ ಕಾಮತ್ ಮತ್ತು ಆರತಿ. ಎಸ್.ಟಿ. ನಿರೂಪಿಸಿದರು. ತಾಲೂಕು ಗೌರವ ಕಾರ್ಯದರ್ಶಿ ಸಾವಿತ್ರಿ ಹೆಚ್.ಜಿ. ವಂದಿಸಿದರು. ಕಾರ್ಯಕ್ರಮದ ಮೊದಲಿಗೆ ಶಾಲಾ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಕೊನೆಯಲ್ಲಿ ಸಾಮೂಹಿಕ ರಾಷ್ಟçಗೀತೆ ಹಾಡಲಾಯಿತು.