ಮರಣ ಎಂದಾಕ್ಷಣ ನಮಗೆ ನಮ್ಮ ಕಟುಂಬದವರ, ನೆಂಟರ, ಆಪ್ತರ, ಮಾಧ್ಯಮಗಳಲ್ಲಿ ಕಂಡ ದಾರುಣವಾದ, ಅಕಾಲಿಕ ಮರಣಗಳಷ್ಟೇ ಕಣ್ಣೆದುರು ಬರುತ್ತವೆ. ಆದರೆ ಬ್ರಹ್ಮಾಂಡ ಹೊಂದಿರುವ ಸಕಲ ಜೀವಿಗಳೂ ಹುಟ್ಟು ಸಾವಿನ ಚಕ್ರದಿಂದ ಹೊರತಾಗಿಲ್ಲ. ನಮ್ಮಂತೇ ನೋವು ನಲಿವಿಗೆ ಒಳಗಾಗದಿಲ್ಲ. ನಮ್ಮ ಹೃದಯಕ್ಕೆ ಹತ್ತಿರವಾದವರು ಸತ್ತ ಕೂಡಲೇ ಏನೋ ಘಟಿಸಬಾರದ್ದು ಘಟಿಸಿತೆಂದು ಹೌಹಾರುತ್ತೇವೆ, ಅಳುತ್ತೇವೆ. ದೇವರನ್ನೂ ಶಪಿಸುತ್ತೇವೆ.
ಆಗಸ್ಟ್ ಐದರ ಬೆಳಿಗ್ಗೆ ಎರಡು ಮರಣ ವಾರ್ತೆ ಎದುರಾಯಿತು. ಬ್ರಾಹ್ಮಣರ ಬೀದಿಯಲ್ಲಿ ಮಾತೆಯೊಬ್ಬರು ಅಸುನೀಗಿದ್ದರು. ಅಲ್ಲಿಗೆ ತೆರಳಿದಾಗ, ಅವರ ಪುತ್ರಿ ಬಿಕ್ಕಳಿಸಿದಳು. ‘ಅಳಬೇಡಮ್ಮ ಇಷ್ಟು ವರ್ಷವಾದರೂ ಜೊತೆಯಲ್ಲಿದ್ದರಲ್ಲ. ಇಂದು ಅವರು, ನಾಳೆ ನಾವು - ಅಲ್ಲವೇ’ ಎಂದು ಸಮಾಧಾನಿಸಿದೆವು.
ಅಲ್ಲಿಂದ ಮುಂದೇ ಶ್ರೀ ಓಂಕಾರೇಶ್ವರ ದೇವಾಲಯ ಸನ್ನಿಧಿಯಲ್ಲಿ ದಶಕಕ್ಕೂ ಹೆಚ್ಚು ಸಮಯದಿಂದ ಇದ್ದು ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಬಸವನಂತಿದ್ದ ‘ನಂದೀಶ’ ಅಸುನೀಗಿದ್ದ. ಮಾನವೀಯತೆ ಮೈಗೂಡಿಸಿ ಕೊಂಡಿದ್ದ ಒಂದಷ್ಟು ಸದ್ಭಕ್ತರು ಅದರ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ್ದರು. ಮಲಗಿದ್ದ ನಂದೀಶನಿಗೆ ಹೂ ಅಲಂಕಾರ ಮಾಡಿ, ಆರತಿ ಎತ್ತಿ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು. ನಂದೀಶನ ಪುತ್ರ, ಇನ್ನೂ ವರುಷದಾಟದ ಪುಟ್ಟ ಕರು ‘ಗಣೇಶ’ ಸ್ತಬ್ಧವಾಗಿ ಮಲಗಿದ್ದ ಅಪ್ಪನನ್ನು ಮೂಸಿ ನೆಕ್ಕಿ ಆಗಾಗ ಮೂಸಿ ನೆಕ್ಕಿ ಅತ್ತಿಂದಿತ್ತ ಚಡಪಡಿಸುತ್ತ ಒಡಾಡುತ್ತಿದ್ದ ದೃಶ್ಯ ಹೃದಯವಿದ್ರಾವಕವಾಗಿತ್ತು. ಶಾಸ್ತç ಮುಗಿದು, ಗುಂಡಿಗೆ ಇಳಿಸಿ ಹೂಳಲು ಯಂತ್ರದಿAದ ಎತ್ತುವಾಗ ದೂರ ಓಡಿದ ಗಣೇಶ ಒಂದೆಡೆ ‘ಅಂಬಾ, ಅಂಬಾ’ ಎಂದು ಆಕ್ರಂದಿಸುತ್ತಿರಲು, ದೂರದಲ್ಲಿ ಕಟ್ಟಿ ಹಾಕಿದ್ದ ನಂದೀಶನ ಅರ್ಧಾಂಗಿ ‘ಕಾವೇರಿ’ಯೂ ಒಂದೇ ಸಮನೆ ‘ಅಂಬಾ’ ಎಂದು ಗೋಳಿಡಲಾರಂಭಿಸಿದಳು.
ಅಗಲಿಕೆಯ ನೋವು ಮಾನವನಿಗೂ ಒಂದೆ, ಪ್ರಾಣಿಗಳಿಗೂ ಒಂದೆ. ಅಲ್ಲಿ ತಾಯಿಯ ಪಾರ್ಥಿವ ಶರೀರದ ಎದುರು ಕುಳಿತ ಮಗಳಿಗೆ ನಾವು ಎರಡು ಸಾಂತ್ವನದ ನುಡಿ ಹೇಳಲು, ಅದನ್ನು ಆಕೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಆದರೆ ಇಲ್ಲಿ? ಮೂಕ ಕರು, ಮೂಕ ತಾಯಿಯ ರೋದನದ ಒಂದAಶವನ್ನೂ ಹಂಚಿ ಕೊಳ್ಳಲಾರದ
(ಮೊದಲ ಪುಟದಿಂದ) ಅಸಹಾಯಕತೆ ನಮ್ಮಲ್ಲಿ ಚಡಪಡಿಕೆ ಉಂಟು ಮಾಡಿತು. ಉತ್ತರವೇ ಸಿಗದೆ ಎಷ್ಟು ನೊಂದುಕೊಳ್ಳಬಹುದು ಪ್ರಾಣಿಗಳು. ಅದರತ್ತ ಗಮನವೇ ಹರಿಸದ ನಾವು ಅವುಗಳನ್ನು ಹೊಡೆದು, ಬಡಿದು ಕೆಲಸಕ್ಕೆ ತಳ್ಳುವೆವು. ಕೊಲ್ಲಲೂ, ತಿನ್ನಲೂ ಹೇಸುವುದಿಲ್ಲ.
ಒಬ್ಬಾಕೆಯ ಸಾವು ಫೇಸ್ಬುಕ್ಕಿನಲ್ಲಿ ಪೋಸ್ಟ್ ಆಯ್ತು. ಈಕೆಯ ಸಾವು ಅನ್ಯಾಯ ಅಂದರು ಒಬ್ಬರು ದೇವರು ಎಂಥ ಕ್ರೂರಿ ಎಂದರು ಮತ್ತೊಬ್ಬರು. ದೇವರಿಗೆ ಕರುಣೆ ಇಲ್ಲ ಎಂದರು ಇನ್ನೊಬ್ಬರು. ದೇವರು ಎಲ್ಲಿ, ಯಾವಾಗ ನಮ್ಮ ಆಯುಷ್ಯ ೭೦, ೮೦, ೯೦ ವರ್ಷ ನೀಡುತ್ತೇನೆ ಎಂದು ಖಾತರಿ ಕೊಟ್ಟಿದ್ದಾನೆ? ಇವರೆಲ್ಲ ಯಾವ ದೇವರ ಬಗ್ಗೆ ಮಾತನಾಡುತ್ತಾರೆ. ಆಯುಷ್ಯದ ಖಾತರಿ ಬೈಬಲ್ಲಿನಲ್ಲಾಗಲಿ, ಖುರಾನಿನಲ್ಲಾಗಲಿ, ಭಗವದ್ಗೀತೆಯಲ್ಲಾಗಲಿ, ಗುರುಗ್ರಂಥ ಸಾಹೆಬ್ನಲ್ಲಾಗಲಿ ಇಲ್ಲವೆ ಇಲ್ಲವಲ್ಲ. ಇನ್ನು ಇವರುಗಳು ಯಾವ ಆಧಾರದಲ್ಲಿ ದೇವರನ್ನು ಹಳಿಯುತ್ತಾರೆ? ಯಾವ ದೇವರನ್ನು ಹಳಿಯುತ್ತಾರೆ?
ಸಾವು ಯಾವಾಗ... ಹೇಗೆ, ಎಲ್ಲಿ ಬರುತ್ತದೆ ಎನ್ನಲಾಗದು ಎಂಬದು ಅನುಭವವೇದ್ಯ. ‘ನನ್ನದು’ ಎಂದು ಅರಮನೆ ಕಟ್ಟಿಸಿ, ನೂರಾರು ಎಕರೆ ಭೂಮಿ ಖರೀದಿಸಿ ಬೀಗುವವನೂ ಯಾವುದೋ ಜಾಗದಲ್ಲಿ, ಬೀದಿಯಲ್ಲಿ, ನೀರಿನಲ್ಲಿ ಅಸುನೀಗುತ್ತಾನೆ. ಸತ್ತ ಬಳಿಕ ಸ್ವರ್ಗದಂತೆ ಅಲಂಕರಿಸಿ ಮಲಗಿಕೊಂಡಿದ್ದ ಅವನ ಶಯನ ಗ್ರಹ, ಊಟದ ಕೋಣೆ, ಪೂಜಾ ಕೋಣೆ ಎಲ್ಲಿಗೂ ಅವನ ಪಾರ್ಥಿವ ಶರೀರ ತರುವುದಿಲ್ಲ. ಕಾರಣ ? ಅದು ಆತನ ಗತಪ್ರಾಣಶರೀರ. ಹೊರಗಿನ ಜಗಲಿ ಅಥವಾ ಎದುರು ಕೋಣೆಯ ತನಕ ಮಾತ್ರ ಆತನಿಗೆ ಈಗ ಪ್ರವೇಶ. ಅದೂ ಕೆಲ ಗಂಟೆಗಳ ಕಾಲ ಮಾತ್ರ!
ಇವೆಲ್ಲ ಜೀವನವೆಂಬ ನಾಟಕದ ಸಿಹಿ-ಕಹಿ ಪಾತ್ರಗಳಷ್ಟೇ ಎಂಬ ಸತ್ಯವನ್ನು ನಾವು ಅರಿಯಬೇಕು. ನಿನ್ನೆ ಸ್ಪುರದ್ರೂಪಿ ತರುಣನೊಬ್ಬ ಮೃತಪಟ್ಟ, ವಾಹನ ಅಪಘಾತಗಳಲ್ಲಿ ಅದೆಷ್ಟು ತರುಣ - ತರುಣಿಯರು ಅಸುನೀಗುತ್ತಿದ್ದಾರೆ.? ಬಾಗಲಕೋಟೆ ನಿವಾಸಿ, ಮಡಿಕೇರಿ ಜೈಲಿನಲ್ಲಿದ್ದ ಗಟ್ಟಿಮುಟ್ಟಗಿದ್ದ ಜೈಲರ್ ಒಬ್ಬರು ಮೂವತ್ತನೇ ವಯಸ್ಸಿಗೇ ಹೃದಯಾಘಾತದಿಂದ ಅಸುನೀಗಿದರು. ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದವರು, ಮೈಕ್ ಹಿಡಿದು ಭಾಷಣ ಮಾಡುತ್ತಿದ್ದವರು, ಕುಸ್ತಿ ಮಾಡುತ್ತಿದ್ದವರು ಎಲ್ಲೆಂದರಲ್ಲಿ ಕುಸಿದು ಬೀಳುತ್ತಿರುವುದನ್ನು ನೋಡುತ್ತೇವೆ.
ಈ ಎಲ್ಲ ಸಾವಿಗೂ ಕ್ರೆöÊಸ್ತ ಕಾರಣವೇ, ಕೃಷ್ಣ ಕಾರಣವೇ, ಪೈಗಂಬರ್ - ನಾನಕ್ ಕಾರಣವೇ? ಅತಿಯಾದ ಸ್ವಾರ್ಥ, ತೀರದ ಲೋಲುಪತೆ, ಅನರ್ಥಕಾರಿ ದುರಭಿಮಾನ, ಪ್ರಾಪಂಚಿಕದೆಡೆ ಮಾತ್ರ ದೃಷ್ಟಿಕೋನ ಉಳ್ಳವರು - ಯಾವುದೇ ಧರ್ಮಗ್ರಂಥಗಳ ಸಾರವನ್ನು ಸಂಪೂರ್ಣ ಓದದವರು, ಅಭ್ಯಸಿಸದವರು ಮಾತ್ರ ದೇವರನ್ನು ಜರೆಯುತ್ತಾರೆ. ಇಲ್ಲಿ ದೇವರನ್ನು ಜರೆಯುವುದು ವಿಷಯವಲ್ಲ. ಜೀವನದ ಸತ್ಯವನ್ನು, ಗುರಿಯನ್ನು ಅರಿಯದೆ ಭ್ರಮಾ ಜೀವನ ನಡೆಸಿ, ಸಂಕಟ ಎದುರಾದಾಗ ಮರುಳರಂತೆ ವರ್ತಿಸುವ ಅಪಾಯದಿಂದ ಹೊರ ಬರಬೇಕೆಂಬುದು ಮಾತ್ರ ವಿಷಯ. ಇದಕ್ಕೆ ಇರಿಸಬೇಕಾದ ಮುಂದಿನ ಹೆಜ್ಜೆ, ಪರಿಹಾರ ಅಂದರೆ ಪ್ರಾಪಂಚಿಕ ಜ್ಞಾನದೊಂದಿಗೆ ಅಧ್ಯಾತ್ಮಿಕ ಜ್ಞಾನವನ್ನು ಸಂಪಾದಿಸುವುದು. ಎಲ್ಲಾ ಧರ್ಮಗಳಲ್ಲೂ ರಾಜರಾಗಿದ್ದು ರಾಜ್ಯವಾಳುತ್ತಾ ಅಧ್ಯಾತ್ಮಿಕ ಉತ್ತುಂಗ ಸಾಧಿಸಿದವರ ಉದಾಹರಣಗಳಿವೆ. ಅಂತಹವರು ನಮಗೆ ಆದರ್ಶವಾಗಿರಬೇಕು.
‘ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲಿ ಬೇಡಿ ಹುಚ್ಚಪ್ಪಗಳಿರಾ’ ಎಂದು ಪುರಂದರರು ಹೇಳಿದ್ದಾರೆ. ಭಗವಂತನ ಸಾಕ್ಷಾತ್ಕಾರ ಆಗಲು ಮಾನವ ಜನ್ಮ, ಸತ್ಯಾನ್ವೇಷಣೆ ಆಸಕ್ತಿ, ಮಾರ್ಗದರ್ಶಕರ ಅವಶ್ಯಕತೆ ಇದೆ. ಅದು ದೊರೆತರೆ ಮಿಕ್ಕವೆಲ್ಲಾ ಲಭ್ಯ ಎಂದು ಶಂಕರಾಚಾರ್ಯರು ಹೇಳಿದ್ದಾರೆ. ಪ್ರಯಾಣದ ನಡುವೆ, ಮಾರ್ಗ ಅರಿಯದಾದಾಗ - ಯಾರೊ ಅಪರಿಚಿತನಲ್ಲಿ ರಸ್ತೆ ಕೇಳುವಿರ - ಅವನು ತೋರಿದ ಮಾರ್ಗದಲ್ಲಿ ತೆರಳುತ್ತೀರ. ಅದೇ ಅಧ್ಯಾತ್ಮಿಕತೆಯಲ್ಲಿ ಗುರು ತೋರುವ ಮಾರ್ಗದಲ್ಲಿ ಸಂಶಯಪಡುತ್ತೀರಲ್ಲಾ ಎಂದು ನಾಥಪಂತದ ಗುರು ಬಿ.ಕೆ. ಸುಬ್ಬಯ್ಯ ಅವರು ಕೇಳುತ್ತಿದ್ದರು.
ಜೀವನ ಸಾರ್ಥಕವಾಗಬೇಕಾದಲ್ಲಿ ಅರೆಬರೆ ಜ್ಞಾನ ತುಂಬಿ, ರಾಗ, ದ್ವೇಷ, ಸ್ವಾರ್ಥ, ದುರಭಿಮಾನ ದೂಷಣೆಗಳಲ್ಲೇ ದಿನದೂಡಿ ಸಮಾಜವನ್ನು ಹಾಳುಗೆಡಹಿ, ಮುಂದಿನ ಪೀಳಿಗೆಯನ್ನು ದಾರಿ ತಪ್ಪಿಸುವ ಅಪಾಯದಿಂದ ಹೊರಬಂದು ಅಧ್ಯಾತ್ಮಿಕ ಜ್ಞಾನವನ್ನೂ ಕಡ್ಡಾಯವಾಗಿ ಅರಿತು ಸಾಗುವುದು ಬುದ್ಧಿವಂತಿಕೆ. ಅನಾಥ ಕರು ‘ಗಣೇಶ’ನಂತೆ ಚಡಪಡಿಸುವ ಬದಲು ‘ಜೀವನ ಅಂದರೆ ಹೀಗೆ’ ಎಂದು ಬಂದುದನ್ನು ಎದುರಿಸಿ ನಿಯಾಮಕನಿಗೆ ವಂದಿಸಿ ಬಾಳುವುದರಲ್ಲಿ ಅರ್ಥವಿದೆ. ಬಾಳಿನ ಸತ್ಯ ಅರಿತವನಿಗೆ ಜೀವನ ಜೇನಿನಂತಾಗುವುದAತೆ.
ಅದಕ್ಕಾಗಿಯೇ ಕವಿ ಭಕ್ತನ ಭಾವಕ್ಕಿಳಿದು ಬರೆದ ‘ಹಾಲಲ್ಲಾದರೂ ಹಾಕು, ನೀರಲ್ಲಾದರು ಹಾಕು - ಮುಳ್ಳಲ್ಲಿ ಮುಳ್ಳಾಗಿ, ಕಲ್ಲಲ್ಲಿ ಕಲ್ಲಾಗಿ ಒಂದಾಗಿರುವೆ ರಾಘವೇಂದ್ರ’ ಎಂದು.
ಮೊನ್ನೆ ಮಿತ್ರನೊಬ್ಬನ ಸಾವು ಘಟಿಸಿತು. ವಯಸ್ಸು ೫೮. ನಿತ್ಯ ಚಟುವಟಿಕೆಯಿಂದ ಇರುತ್ತಿದ್ದ. ಮನೆಯಲ್ಲಿ ಮಲಗಿದ್ದು, ರಾತ್ರಿ ಹನ್ನೆರಡು ಗಂಟೆಗೆ ಶೌಚಕ್ಕೆ ಹೋಗಲು ಎದ್ದ. ಹೋಗಲಾಗಲಿಲ್ಲ. ಸುಸ್ತಾಗುತ್ತಿದೆ ಎಂದ. ಮೂರು ಬಾರಿ ಕೆಮ್ಮಿದ - ಅಷ್ಟೇ - ಅಂತಕನ ಪಾಲಾದ. ಅಷ್ಟು ಸನಿಹವಿದೆ ಎಲ್ಲರ ಮರಣ. ಅವರಿವರನ್ನು ದೂಷಿಸದೆ, ದೇವರನ್ನು ಹಳಿಯದೆ, ದೈವತ್ವ ಅರಿತು ಜೀವನ ಪಾವನ ಮಾಡಿಕೊಳ್ಳೋಣ.
-ಬಿ.ಜಿ. ಅನಂತಶಯನ