ಚೆಯ್ಯಂಡಾಣೆ, ಆ. ೨೪: ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ೧೭ನೇ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕಕ್ಕಬ್ಬೆ-ಕುಂಜಿಲ ಗ್ರಾಮದ ಕೆ.ಎಸ್. ಆಯಿಷಾ ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದಾಳೆ.

ಕೊಯಮತ್ತೂರಿನ ಶ್ರೀಕೃಷ್ಣ ಗೌಂಡರ್ ಮಂಟಪದಲ್ಲಿ ನಡೆದ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್‌ನ ಕತಾ, ಕುಮಿತೆ ಹಾಗೂ ಟೀಂ ಕತಾ ವಿಭಾಗದಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕವನ್ನು ಪಡೆದು ಆಯಿಷಾ ಸಾಧನೆ ಮಾಡಿದ್ದಾಳೆ.

ಇವಳು ಕಕ್ಕಬ್ಬೆ-ಕುಂಜಿಲ ಗ್ರಾಮದ ಕೆ.ಎಂ. ಸಮೀರ್ ಹಾಗೂ ಕೈರುನ್ನಿಸ ದಂಪತಿಯ ಪುತ್ರಿ. ನಾಪೋಕ್ಲುವಿನ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆ ವೀರಾಜಪೇಟೆಯ ಕರಾಟೆ ತರಬೇತುದಾರ ಸೆನ್‌ಸಾಯಿ ಎಂ.ಬಿ. ಚಂದ್ರನ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ.